ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಿನ ದೇವರಸನಹಳ್ಳಿಯಲ್ಲಿ ಗ್ರಾಮ ಘಟಕವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.
ಸಂವಿಧಾನ ಜಾರಿಯಾಗಿ ದಶಕಗಳೇ ಕಳೆದರೂ ರೈತರ ಸಮಸ್ಯೆಗಳು ಬಗೆಹರಿದಿಲ್ಲ. ರೈತ ಸಾಲದ ಸುಳಿಯಲ್ಲಿ ಸಿಲುಕಿ ವ್ಯವಸಾಯದಿಂದ ದೂರ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರೈತ ಸಂಘವು ರೈತರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ತಿಳಿಸಿದರು.
ಸೋಮವಾರ ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ, ರೈತ ಸಂಘದ ಹೋರಾಟದ ಫಲವಾಗಿ ಜಮೀನು ಕಳೆದುಕೊಂಡ ರೈತರಿಗೆ ಕಾರ್ಖಾನೆಯಲ್ಲಿ ಖಾಯಂ ಕೆಲಸ, ಕೆರೆ ಒತ್ತುವರಿ, ರಸ್ತೆ ಒತ್ತುವರಿ, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವಂತಹ ಹಲವಾರು ಹೋರಾಟಗಳನ್ನು ನಡೆಸಿ ರೈತರಿಗೆ ನ್ಯಾಯ ಒದಗಿಸಿದೆ. ಸಂವಿಧಾನದ ಆಶಯಗಳು ಈಡೇರಿದ್ದರೆ ಯಾವ ಸಂಘ ಸಂಸ್ಥೆಯ ಹೋರಾಟದ ಅಗತ್ಯವಿಲ್ಲ. ಸಂವಿಧಾನ ಜಾರಿಯಾಗಿ ದಶಕಗಳೇ ಕಳೆದರೂ ರೈತರ ಸಮಸ್ಯೆಗಳು ಬಗೆಹರಿದಿಲ್ಲ. ರೈತ ಸಾಲದ ಸುಳಿಯಲ್ಲಿ ಸಿಲುಕಿ ವ್ಯವಸಾಯದಿಂದ ವಿಮುಖರಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಕರ್ನಾಟಕ ರಾಜ್ಯ ರೈತ ಸಂಘವು ರೈತರ ಸಮಸ್ಯೆಗಳಿಗೆ ಬೆನ್ನೆಲುಬಾಗಿ ಜಾತೀಯತೆಯನ್ನು ಮೀರಿ ಹೋರಾಟ ನಡೆಸುವ ಮೂಲಕ ರೈತರಿಗೆ ನ್ಯಾಯ ಒದಗಿಸುವ ಕೆಲಸ ನಿರ್ವಹಿಸುತ್ತಿದೆ. ರೈತರು ಜಾತೀಯತೆಯನ್ನು ಮೀರಿ ಸಂಘಟಿತರಾಗುವ ಮೂಲಕ ಸರ್ಕಾರದ ಧೋರಣೆಗಳ ವಿರುದ್ಧ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು ಮಾತನಾಡಿ, ನಂಜನಗೂಡು ದೇವರಸನ ಹಳ್ಳಿ ಗ್ರಾಮದ ಮುಖ್ಯ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ಗ್ರಾಮದ ಪರಿಮಿತಿಯಲ್ಲಿ 1 ಕಿ.ಮೀ.ವರೆಗೆ ಮುಖ್ಯರಸ್ತೆ ಅಭಿವೃದ್ಧಿಪಡಿಸದೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಗ್ರಾಮದ ಜನರಿಗೆ ತೊಂದರೆ ಆಗಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದು, ಸಂಬಂಧಪಟ್ಟ ತಾಲೂಕು ಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಿ ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ್ ರಾವ್, ಶಂಕರ ನಾಯಕ, ಸುರೇಶ್, ಮಹದೇವ ನಾಯಕ, ನಾಗಯ್ಯ, ಕರಿಯಯ್ಯ, ಸುಬ್ಬಣ್ಣ, ನಂಜಪ್ಪ, ಸಿದ್ದಪ್ಪ, ಚಿಕ್ಕನಾಗಯ್ಯ, ಮಹೇಶ, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.