ಗೋಕುಲಂನ ವಿದ್ಯಾವರ್ಧಕ ಡಿಪ್ಲೊಮಾ ಕಾಲೇಜಿನಲ್ಲಿ ಆಯೋಜಿದ್ದ ಪುನಶ್ಚೇತನ ಕಾರ್ಯಕ್ರಮವನ್ನು ಗೋಪಾಲಗೌಡ ಉದ್ಘಾಟಿಸಿದರು. ಶ್ರೀಶೈಲ ರಾಮಣ್ಣನವರ್, ಎಸ್.ಸಿ.ಶಿವಕುಮಾರ್, ಡಾ.ಕೃಷ್ಣ ಇದ್ದರು. 
ಮೈಸೂರು

ಹೊಸ ತಂತ್ರಜ್ಞಾನಗಳಲ್ಲಿ ಆಸಕ್ತಿ ಮೂಡಿಸಿಕೊಳ್ಳಿ:ಜೆ.ಕೆ.ಟಯರ್ಸ್‌ ಡಿಜಿಎಂ ಗೋಪಾಲಗೌಡ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿದ್ದು ಅವುಗಳ ಕುರಿತು ವಿದ್ಯಾರ್ಥಿಗಳು ಆಸಕ್ತಿ ಮೂಡಿಸಿಕೊಂಡು ಕಲಿಕೆಯಲ್ಲಿ ತೊಡಬೇಕು
  • ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸಿಮೀತವಾಗದೆ ಪ್ರಾಯೋಗಿಕ ಜ್ಞಾನವನ್ನು ಸಹ ಪಡೆದುಕೊಳ್ಳಬೇಕು
ಮೈಸೂರು:ನವೀನ ತಾಂತ್ರಿಕತೆ ಇರುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಜೆ.ಕೆ.ಟಯರ್ಸ್‌ ಟ್ರಕ್ ರೇಡಿಯಲ್ ಪ್ಲಾಂಟ್‌ನ ಉಪ ಪ್ರಧಾನ ವ್ಯವಸ್ಥಾಪಕ (ಡಿಜಿಎಂ) ಗೋಪಾಲಗೌಡ, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಗೋಕುಲಂನಲ್ಲಿರುವ ವಿದ್ಯಾವರ್ಧಕ ಡಿಪ್ಲೊಮಾ ಕಾಲೇಜಿನ ಸಾಹುಕಾರ್ ಚೆನ್ನಯ್ಯ ಸಭಾಂಗಣದಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ ಡಿಪ್ಲೊಮಾ ಪ್ರಥಮ ವರ್ಷದ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ. ಅವುಗಳ ಕುರಿತು ವಿದ್ಯಾರ್ಥಿಗಳು ಆಸಕ್ತಿ ಮೂಡಿಸಿಕೊಂಡು ಕಲಿಕೆಯಲ್ಲಿ ತೊಡಬೇಕು. ಕಲಿಕೆ ಎಂಬುದು ನಿರಂತರವಾಗಿದ್ದು, ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನದ ಕಡೆಗೂ ಗಮನ ಹರಿಸಬೇಕಿದೆ ಎಂದರು.
ವಿದ್ಯಾರ್ಥಿಗಳು ಅಂಕ ಗಳಿಕೆಗೆ ಸಿಮೀತವಾಗದೆ ಪ್ರಾಯೋಗಿಕ ಜ್ಞಾನವನ್ನು ಸಹ ಪಡೆದುಕೊಳ್ಳಬೇಕು. ನವೀನ ತಾಂತ್ರಿಕತೆ ಇರುವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಡಿಪ್ಲೊಮಾ ಕಲಿಕೆಗೆ ಸಾಕಷ್ಟು ಬೇಡಿಕೆ ಇದ್ದು, ವಿದ್ಯಾರ್ಥಿಗಳು ಹೆಚ್ಚು ಶ್ರದ್ಧೆ, ಆಸಕ್ತಿಯಿಂದ ಅಧ್ಯಯನ ಮಾಡಿದರೆ ಉತ್ತಮ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಮೂಲಕ ಯಶಸ್ಸು ಸಾಧಿಸಬಹುದು. ಪಾಲಕರು ಮಕ್ಕಳನ್ನು ಅತಿಯಾಗಿ ರಕ್ಷಿಸಿಕೊಳ್ಳಬೇಡಿ. ಪ್ರತ್ಯೇಕವಾಗಿ ಬೆಳೆಯಲು ಬಿಡಿ, ಅವರಿಗೆ ಕಷ್ಟಗಳನ್ನು ಅರಿಯಲು ಬಿಟ್ಟರೆ ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಾರೆ ಎಂದರು.
ಪಾಲಿಟೆಕ್ನಿಕ್‌ನ ಸಿಎಂಸಿ ವಿಭಾಗದ ಅಧ್ಯಕ್ಷ ಎಸ್.ಸಿ.ಶಿವಕುಮಾರ್ ಮಾತನಾಡಿ, ತಮ್ಮ ವ್ಯಾಸಂಗ ಸಮಯದಲ್ಲಿ ನಡೆಸಲಾಗುವ ಸೆಮಿನಾರ್, ಕಾರ್ಯಾಗಾರ, ಕೈಗಾರಿಕೆಗಳ ಭೇಟಿ ಅವಕಾಶಗಳನ್ನು ತಪ್ಪದೆ ಉಪಯೋಗಿಸಿಕೊಳ್ಳಿ. ಇದರಿಂದ ನಿಮ್ಮ ಜ್ಞಾನದ ಮಟ್ಟ ಹೆಚ್ಚಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ವಿದ್ಯಾವರ್ಧಕ ಸಂಘದ ಖಜಾಂಚಿ ಶ್ರೀಶೈಲ ರಾಮಣ್ಣನವರ್ ಮಾತನಾಡಿ, ಟೆಕ್ನಾಲಜಿ ಎಲ್ಲದಕ್ಕೂ ಬದಲಿ ವ್ಯವಸ್ಥೆ ಆಗುವುದಿಲ್ಲ. ಮಾನವ ಸಂಪನ್ಮೂಲವೂ ಬೇಕು. ಹಾಗಾಗಿ ವಿದ್ಯಾರ್ಥಿಗಳು ಪರಿಶ್ರಮದಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ತಮ್ಮ ಕನಸುಗಳನ್ನು ಸಾಕಾರ ಮಾಡಿಕೊಳ್ಳಬೇಕು ಎಂದು ಹೇಳಿದರು.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲ ಡಾ.ಕೃಷ್ಣ, ಉಪನ್ಯಾಸಕಿ ಎಸ್.ಸುರಭಿ, ಇಸಿ ವಿಭಾಗದ ಉಪನ್ಯಾಸಕ ಡಿ.ಸಿ.ರಾಕೇಶ್ ಬಾಬು ಇದ್ದರು.