ಸಿಎಫ್‌ಟಿಆರ್‌ಐನಲ್ಲಿ ಸೋಮವಾರ ಐಎಸ್‌ಎಂಟಿ ಕೋರ್ಸ್‌ನಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕವನ್ನು ಪ್ರದಾನ ಮಾಡಲಾಯಿತು. ಡಾ.ಶೈಲಜಾ ಡೊನೆಂಪುಡಿ, ಡಾ.ಗಿರಿಧರ್ ಪರ್ವತಂ, ಡಾ.ಸುರೇಶ್ ಡಿ.ಸಖರೆ, ಡಾ.ರೇವತಿ ಭಾಸ್ಕರನ್, ಎಂ.ಶರವಣ್ ಇದ್ದರು.
- 44ನೇ ಐಎಸ್‌ಎಂಟಿ ಕೋರ್ಸ್‌ನ ಸಮಾರೋಪ
- ಹಿಟ್ಟಿನ ಗಿರಣಿ ಉದ್ಯಮದಲ್ಲಿ ಉದ್ಯೋಗ ಅವಕಾಶಗಳ ವಿಪುಲ
- ವಿದೇಶಗಳಲ್ಲಿ ಹಿಟ್ಟಿನ ಗಿರಣಿ ತಂತ್ರಜ್ಞಾನ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ಬೇಡಿಕೆ
ಮೈಸೂರು: ಸಿಎಫ್‌ಟಿಆರ್‌ಐನಲ್ಲಿ ಗಿರಣಿ ತಂತ್ರಜ್ಞಾನ ಕೋರ್ಸ್ ಕಲಿತ ವಿದ್ಯಾರ್ಥಿಗಳು ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಹೆಚ್ಚು ಬೇಡಿಕೆ ಇರುವ ದಕ್ಷಿಣ ಆಫ್ರಿಕಾ, ನೈಜೀರಿಯಾ, ಆಫ್ರಿಕಾ ದೇಶಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಬೇಕು ಎಂದು ನವದೆಹಲಿಯ ಸಿಎಸ್‌ಐಆರ್ ವಿಜ್ಞಾನಿ, ವ್ಯವಹಾರ ಅಭಿವೃದ್ಧಿ ಗುಂಪಿನ ಮುಖ್ಯಸ್ಥೆ ಡಾ.ಶೈಲಜಾ ಡೊನೆಂಪುಡಿ ಹೇಳಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ(ಸಿಎಫ್‌ಟಿಆರ್‌ಐ) ಆಯೋಜಿಸಿದ್ದ 44ನೇ ಐಎಸ್‌ಎಂಟಿ ಕೋರ್ಸ್‌ನ ಸಮಾರೋಪದಲ್ಲಿ ಮಾತನಾಡಿದರು.
ಹಿಟ್ಟಿನ ಗಿರಣಿ ತಂತ್ರಜ್ಞಾನ (ಫ್ಲೋರ್ ಮಿಲ್ಲಿಂಗ್ ಟೆಕ್ನಾಲಜಿ) ಕೋರ್ಸ್‌ಗಳಿಗೆ ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಬೇಡಿಕೆ ಇದೆ. ಶೈಕ್ಷಣಿಕ ಒಪ್ಪಂದದಿಂದ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬಲಸಂವರ್ಧನೆಗೂ ನೆರವಾಗಲಿದೆ ಎಂದರು.
ಹಿಟ್ಟಿನ ಗಿರಣಿ ಉದ್ಯಮದಲ್ಲಿ ಉದ್ಯೋಗ ಅವಕಾಶಗಳ ವಿಪುಲವಾಗಿವೆ. ಇದು ಭಾರತದಷ್ಟೇ ಅಲ್ಲ, ದುಬೈ ಸೇರಿದಂತೆ ಮಧ್ಯಪ್ರಾಚ್ಯ, ಯೂರೋಪ ಸೇರಿದಂತೆ ವಿದೇಶಗಳಲ್ಲಿ ಹಿಟ್ಟಿನ ಗಿರಣಿ ತಂತ್ರಜ್ಞಾನ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ಬೇಡಿಕೆ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದೀಗ ಆಹಾರ ಒಂದು ಭಾವನಾತ್ಮಕ ಉತ್ಪನ್ನವಾಗಿದೆ. ಇದು ಗಿರಣಿ ಉದ್ಯಮ ಬೆಳವಣಿಗೆ ಪೂರಕ ಅಂಶವಾಗಿದೆ. ಈ ಕ್ಷೇತ್ರದಲ್ಲಿ ಹೊಸ ಅನ್ವೇಷಣೆ, ಕೌಶಲದೊಂದಿಗೆ ಹೊಸತನ ಸೃಷ್ಟಿಸಬೇಕಿದೆ. ಹೊಸ ನವೋದ್ಯಮ ಸ್ಥಾಪನೆಗೆ ಮುದ್ರಾದಂತಹ ಸಾಲಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಿಎಫ್‌ಟಿಆರ್‌ಐನಲ್ಲಿರುವ ಅಂತಾರಾಷ್ಟ್ರೀಯ ಮಿಲ್ಲಿಂಗ್ ತಂತ್ರಜ್ಞಾನ ಶಾಲೆಯ ಪ್ರಾಂಶುಪಾಲ ಡಾ.ಸುರೇಶ್ ಡಿ.ಸಖರೆ ಮಾತನಾಡಿ, ಸಿಎಫ್‌ಟಿಆರ್‌ಐ 1981ರಲ್ಲಿ ಗಿರಣಿ ತಂತ್ರಜ್ಞಾನ ಕೋರ್ಸ್ ಶುರು ಮಾಡಲಾಯಿತು.
ಕೇಂದ್ರ ಸರ್ಕಾರ ಮತ್ತು ಸ್ವಿಜರ್‌ಲೆಂಡ್ ನಡುವೆ ಒಡಂಬಡಿಕೆಯೊಂದಿಗೆ ಇದು ಕಾರ್ಯಾರಂಭಗೊಂಡಿತು. ಗಿರಣಿ ಕೈಗಾರಿಕೆ ಅಗತ್ಯಕ್ಕೆ ತಕ್ಕಂತೆ ಕೋರ್ಸ್ ಅಭಿವೃದ್ಧಿಪಡಿಸಲಾಗಿದೆ. ಉತ್ತಮ ತಾಂತ್ರಿಕ ಪರಿಣತಿ, ನಿರ್ವಹಣೆ ಅಗತ್ಯಯನ್ನು ಪೂರೈಸುವುದರೊಂದಿಗೆ ಕೌಶಲ ಕಲಿಸಲಾಗುತ್ತಿದೆ. ಇದರೊಂದಿಗೆ ಆಧುನಿಕ ಗಿರಣಿ ಕ್ಷೇತ್ರದಲ್ಲಿ ಸವಾಲು ನಿರ್ವಹಣೆಗೆ ಸಜ್ಜುಗೊಳಿಸಲಾಗುವುದು ಎಂದರು.
ಹಿಟ್ಟಿನ ಗಿರಣಿ ಕ್ಷೇತ್ರದಲ್ಲಿನ ಮಹತ್ವದ ಬದಲಾವಣೆಯಲ್ಲಿ ಸಿಎಫ್‌ಟಿಆರ್‌ಐ ದೊಡ್ಡ ಕೊಡುಗೆ ಇದೆ. ಇಲ್ಲಿ ಈ ಕೋರ್ಸ್ ಕಲಿತ 900 ವಿದ್ಯಾರ್ಥಿಗಳು ಬಾಂಗ್ಲಾದೇಶ, ಕಾಂಬೋಡಿಯಾ, ಘಾನಾ, ಜೋರ್ಡಾನ್, ಕೀನ್ಯಾ, ಲಿಬಿಯಾ, ನೇಪಾಳ, ಮಂಗೋಲಿಯಾ, ಒಮನ್, ಶ್ರೀಲಂಕಾ, ಸಿರಿಯಾ, ಯುಎಸಿ ಸೇರಿದಂತೆ 120 ದೇಶಗಳಲ್ಲಿ ಕೆಲಸ ಮಾಡುವ ಆ ದೇಶ ಆಹಾರ ಸ್ವಾವಲಂಬನೆ ಸಾಧಿಸಲು ನೆರವಾಗಿದ್ದಾರೆ. ಜತೆಗೆ, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಗಿರಣಿ ಕೈಗಾರಿಕಾ ಕ್ಷೇತ್ರದಲ್ಲೂ ಗುಣಮಟ್ಟ ವೃದ್ಧಿಯಾಗಿದೆ ಎಂದರು.
ಸಂಸ್ಥೆಯ ನಿರ್ದೇಶಕ ಡಾ.ಗಿರಿಧರ್ ಪರ್ವತಂ, ವಿಜ್ಞಾನಿ ಡಾ.ರೇವತಿ ಭಾಸ್ಕರನ್, ಸಂಚಾಲಕ ಎಂ.ಶರವಣ್ ಇದ್ದರು