ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್‌ನಿಂದ ವಿಜಯನಗರ ರೈಲ್ವೆ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಡಾ.ಸಿ.ಎನ್.ಅಶ್ವತ್ಥನಾರಾಯಣ, ಪ್ರೊ.ಎಂ.ಕೃಷ್ಣೇಗೌಡ, ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್, ಡಿ.ಶ್ರೀಹರಿ, ಕೆ.ವಿ.ಶ್ರೀಧರ್ ಇತರರು ಇದ್ದರು. 
ಮೈಸೂರು

ಸಮಾಜಕ್ಕೆ ಕೊಡುಗೆ ನೀಡುವ ಸಮರ್ಥರನ್ನು ಸೃಷ್ಟಿಸಿ:ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಸಲಹೆ

ಪ್ರಮುಖ ಮುಖ್ಯಾಂಶಗಳು

  • ಒಟ್ಟಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ
  • ಸಮಾಜಕ್ಕೆ ಸಹಾಯ ಮಾಡುವುದು ಮತ್ತು ಪರಿಸರವನ್ನು ರಕ್ಷಿಸುವುದೇ ನಿಜವಾದ ದೇಶಭಕ್ತಿ

ಮೈಸೂರು:

ಶಿಕ್ಷಣವು ಕೇವಲ ಅಂಕ ಗಳಿಸಲು ಅಥವಾ ಉದ್ಯೋಗ ಪಡೆಯಲು ಮಾತ್ರ ಇರಬಾರದು. ಅದು ಸಮಾಜಕ್ಕೆ ಕೊಡುಗೆ ನೀಡುವ ಸಮರ್ಥ ನಾಗರಿಕರನ್ನು ಸೃಷ್ಟಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ನವಭಾರತ್ ನಿರ್ಮಾಣ್ ಸೇವಾ ಟ್ರಸ್ಟ್‌ನಿಂದ ವಿಜಯನಗರ ರೈಲ್ವೆ ಬಡಾವಣೆಯಲ್ಲಿ ಆಯೋಜಿಸಿದ್ದ ಸಾಧಕರಿಗೆ ಸತ್ಕಾರ, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಳಿನ ಭಾರತವನ್ನು ಕೇವಲ ಸರ್ಕಾರಗಳು ಮತ್ತು ಸಂಸ್ಥೆಗಳು ಮಾತ್ರ ನಿರ್ಮಿಸಲು ಸಾಧ್ಯವಿಲ್ಲ. ಬದಲಿಗೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಉದ್ಯಮಿಗಳು ಮತ್ತು ಸಾಮಾನ್ಯ ನಾಗರಿಕರು ಒಟ್ಟಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರ ಇದು ಸಾಧ್ಯ. ವಿದ್ಯಾರ್ಥಿಗಳು ಕೇವಲ ವೈಯಕ್ತಿಕ ಯಶಸ್ಸಿಗೆ ಸೀಮಿತವಾಗದೆ, ತಾವಿರುವ ಸಮಾಜದ ಅಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು. ದೇಶಭಕ್ತಿ ಎಂದರೆ ಕೇವಲ ದೇಶದ ಮೇಲಿನ ಪ್ರೀತಿಯಷ್ಟೇ ಅಲ್ಲ, ಬದಲಿಗೆ ಅದು ದೈನಂದಿನ ಜವಾಬ್ದಾರಿ. ಇತರರನ್ನು ಗೌರವಿಸುವುದು, ಶಿಸ್ತುಪಾಲನೆ, ಶ್ರೇಷ್ಠತೆಯ ಸಾಧನೆ, ಸಮಾಜಕ್ಕೆ ಸಹಾಯ ಮಾಡುವುದು ಮತ್ತು ಪರಿಸರವನ್ನು ರಕ್ಷಿಸುವುದೇ ನಿಜವಾದ ದೇಶಭಕ್ತಿ ಎಂದರು.
ರಾಷ್ಟ್ರಧ್ವಜಾರೋಹಣ ನೆರವೇರಿಸಿದ ವಾಗ್ಮಿ ಪ್ರೊ. ಎಂ.ಕೃಷ್ಣೇಗೌಡ ಮಾತನಾಡಿ, ಸ್ವಾತಂತ್ರ್ಯ ಎಂಬುದು ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುವ ಐತಿಹಾಸಿಕ ಸಾಧನೆಯಲ್ಲ, ಪ್ರತಿಯೊಬ್ಬ ನಾಗರಿಕನು ತನ್ನ ಕೆಲಸಗಳ ಮೂಲಕ ಮುನ್ನಡೆಸಬೇಕಾದ ಜವಾಬ್ದಾರಿ ಎಂಬ ಸ್ಪಷ್ಟ ಸಂದೇಶ ಇಲ್ಲಿದೆ. ಅದನ್ನು ಅರ್ಥ ಮಾಡಿಕೊಂಡು ಸ್ವಾತಂತ್ರೃವನ್ನು ಜೋಪಾನ ಮಾಡಬೇಕು ಎಂದು ಹೇಳಿದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಜೀ ಮಹಾರಾಜ್ ಮಾತನಾಡಿ, ಯಶಸ್ಸು ರಾತ್ರೋರಾತ್ರಿ ಸಿಗುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಅಂಕಗಳ ಹಿಂದೆ ಅವರ ಕಷ್ಟ, ಶಿಕ್ಷಕರ ಮಾರ್ಗದರ್ಶನ, ಪಾಲಕರ ತ್ಯಾಗ ಮತ್ತು ಸಮಾಜದ ಪ್ರೋತ್ಸಾಹವಿರುತ್ತದೆ. ಹಾಗಾಗಿ ವಿದ್ಯಾರ್ಥಿಗಳನ್ನು ಸಾರ್ವಜನಿಕವಾಗಿ ಗೌರವಿಸುವ ಮೂಲಕ ಇದರ ಹಿಂದೆ ಶ್ರವಹಿಸುವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಉತ್ಕೃಷ್ಟತೆಗೆ ಪ್ರೋತ್ಸಾಹ ಸಿಗಬೇಕು ಎಂದರು.
ನವ ಭಾರತ್ ನಿರ್ಮಾಣ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್ ಮಾತನಾಡಿ, ಕೇವಲ ಸ್ವಾತಂತ್ರ್ಯ ದಿನಾಚರಣೆಗೆ ಮಾತ್ರ ಕಾರ್ಯಕ್ರಮ ಸೀಮಿತಗೊಳಿಸದೆ. ಯುವ ಸಾಧಕರನ್ನು ಗುರುತಿಸಲು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಬಲವಾದ ಹಾಗೂ ಪ್ರಗತಿಪರ ಭಾರತವನ್ನು ನಿರ್ಮಿಸುವ ಜವಾಬ್ದಾರಿಯು ಪ್ರತಿಯೊಬ್ಬ ಪೀಳಿಗೆಯ ಮೇಲಿದೆ. ಅದನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದರು ಹೇಳಿದರು.
ಜಿಎಸ್‌ಎಸ್ ಸಂಸ್ಥೆಯ ಸಂಸ್ಥಾಪಕ ಡಿ.ಶ್ರೀಹರಿ ಇತರರು ಇದ್ದರು. ಅತ್ಯುತ್ತಮ ಅಂಕಗಳನ್ನು ಗಳಿಸಿದ 175 ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.