ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ಅವರು ನಗರದಲ್ಲಿ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಜಿಲ್ಲಾ ಕಮಿಟಿ ಸಭೆಯನ್ನು ನಡೆಸಿದರು. ಎಲ್.ನಾಗೇಶ್, ಡಾ.ನಾಗೇಶ್ ಆರಾಧ್ಯ ಇತರ ಅಧಿಕಾರಿಗಳಿದ್ದರು. 
ಮೈಸೂರು

ವಿದ್ಯಾರ್ಥಿಗಳಲ್ಲಿ ಮಾದಕ ವಸ್ತು ವಿರುದ್ದ ಜಾಗೃತಿ ಮೂಡಿಸಿ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ಸೂಚನೆ
ಮೈಸೂರು: ಶಾಲಾ-ಕಾಲೇಜುಗಳಲ್ಲಿ ವಾರಕ್ಕೊಮ್ಮೆ ಮಾದಕ ವಸ್ತು ವಿರುದ್ದ ಜಾಗೃತಿ ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ತಿಳಿಸಿದರು.
ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಜಿಲ್ಲಾ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಭಿವೃದ್ಧಿಪಡಿಸಿರುವ ಸಹಾಯವಾಣಿ 1933 ಹಾಗೂ ಇಮೇಲ್ (-್ಝಠಿ;ಡಿಡಿಡಿ.್ಞ್ಚಚಿಞಚ್ಞ.ಜಟ.ಜ್ಞಿ) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಾದಕ ವಸ್ತುಗಳ ಮಾರಾಟ ಅಥವಾ ಕಳ್ಳ ಸಾಗಣೆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಈ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರು.
ಶಾಲಾ-ಕಾಲೇಜು ಆವರಣ ಹಾಗೂ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿ ವಿದ್ಯಾರ್ಥಿಗಳ ಚಲನವಲನದ ಮೇಲೆ ನಿಗಾ ವಹಿಸಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ಬ್ಯಾನರ್‌ಗಳ ಮೂಲಕ ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಹಾಸ್ಟೆಲ್‌ಗಳ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಬೇಕು, ಹಾಸ್ಟೆಲ್‌ಗಳಿಗೆ ಪದೇಪದೆ ಬರುವ ಅನುಮಾನಾಸ್ಪದ ವ್ಯಕ್ತಿಗಳು, ಫುಡ್ ಡೆಲಿವರಿ ಬಾಯ್ಸ ಹಾಗೂ ಟೀ ಸರಬರಾಜು ಮಾಡುವವರ ವಾಹನ ಸಂಖ್ಯೆ ಪರಿಶೀಲಿಸಬೇಕು. ಸಂಶಯ ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ನಗರ ಮತ್ತು ಜಿಲ್ಲೆಯ ಮೆಡಿಕಲ್ ಸ್ಟೋರ್, ಫಾರ್ಮಸಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ನಿಷೇಧಿತ ಮಾದಕ ಮಾತ್ರೆ, ಮದ್ದುಗಳ ಮಾರಾಟ ಕಂಡುಬಂದರೆ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ತಕ್ಷಣ ದಾಳಿ ನಡೆಸಬೇಕು ಎಂದು ಹೇಳಿದರು.
ಅರಣ್ಯ, ಕೃಷಿ ಹಾಗೂ ಅಬಕಾರಿ ಇಲಾಖೆಯು ಜಿಲ್ಲೆಯ ಕಾಡಂಚಿನ ಗ್ರಾಮಗಳು, ಹಾಡಿಗಳು ಹಾಗೂ ಜಮೀನುಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವುದನ್ನು ಪತ್ತೆಹಚ್ಚಲು ಡ್ರೋನ್ ಕ್ಯಾಮರಾ ಬಳಸಬೇಕು. ಅಬಕಾರಿ ಇಲಾಖೆಯು ಅಕ್ರಮ ಗಾಂಜಾ ತೆರವುಗೊಳಿಸಲು ಪೋಲಿಸ್ ತಂಡದೊಂದಿಗೆ ಸಹಕರಿಸಬೇಕು. ಬೈಲಕುಪ್ಪೆ ಹಾಗೂ ಗುರುಪುರ ಬಳಿ ಗಾಂಜಾ ಬೆಳೆಯುವುದು ಅಥವಾ ಮಾರಾಟ ಮಾಡುವುದರ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ನಿರ್ದೇಶಿಸಿದರು.
ಜಿಎಸ್‌ಟಿ ಇಲಾಖೆಯ ಅಧಿಕಾರಿಗಳು ಸರಕು ಸಾಗಣೆ ವಾಹನಗಳನ್ನು ತಪಾಸಣೆ ಮಾಡುವಾಗ ಮಾದಕ ವಸ್ತುಗಳು ರವಾನೆಯಾಗುತ್ತಿವೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಅನುಮಾನ ಬಂದಲ್ಲಿ ಪೊಲೀಸರಿಗೆ ವರದಿ ಮಾಡಬೇಕು ಎಂದು ಹೇಳಿದರು.
ಪುನಶ್ಚೇತನ ಕೇಂದ್ರಗಳು ಹಾಗೂ ಜೈಲುಗಳಲ್ಲಿ ಮಾದಕ ವ್ಯಸನಿಗಳಿಗೆ ಸಮಾಲೋಚನೆ ನಡೆಸಬೇಕು. ಈ ಸಂದರ್ಭದಲ್ಲಿ ಬೆಳಕಿಗೆ ಬರುವ ಡ್ರಗ್ಸ್ ಸರಬರಾಜಿನ ಮೂಲ ಹಾಗೂ ‘ಪೆಡ್ಲರ್‌ಗಳ’ ವಿವರ ಪಡೆದು ಪೊಲೀಸರಿಗೆ ನೀಡಬೇಕು. ಕೇಂದ್ರ ಹಾಗೂ ಉಪ ಕಾರಾಗೃಹಗಳಲ್ಲಿರುವ ಬಂಧಿಗಳು ಮಾದಕ ವ್ಯಸನಿಗಳಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಎಸ್‌ಪಿ ಎಲ್.ನಾಗೇಶ್, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ನಾಗೇಶ್ ಆರಾಧ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.