ನಗರದಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವದಲ್ಲಿ ಡಾ.ಭಾಷ್ಯಂ ಸ್ವಾಮಿ ಅವರಿಗೆ ‘ಸಂಸ್ಕೃತ ಸೇವಾ ಶಿರೋಮಣಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ವಿ.ಗಿರೀಶ್‌ಚಂದ್ರ, ಪ್ರೊ.ಸಿ.ಪಾಲಯ್ಯ, ಡಾ.ಪಿ.ಸತ್ಯನಾರಾಯಣ, ಎನ್.ಇಂದ್ರೇಶಪ್ಪ ಇನ್ನಿತರರಿದ್ದರು. 
ಮೈಸೂರು

ಮಹಾಕಾವ್ಯಗಳ ಬಗ್ಗೆ ಅರಿವು ಮೂಡಿಸಿ: ಕುಲಸಚಿವ ಡಾ.ವಿ.ಗಿರೀಶ್‌ಚಂದ್ರ

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತೋತ್ಸವದಲ್ಲಿ ಡಾ.ಭಾಷ್ಯಂ ಸ್ವಾಮಿಗೆ ಪ್ರಶಸ್ತಿ ಪ್ರದಾನ
ಮೈಸೂರು: ಮಹಾಕಾವ್ಯಗಳು, ವೇದ-ಉಪನಿಷತ್ತುಗಳನ್ನು ಪ್ರಸ್ತುತ ವರ್ತಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ   ತಿಳಿಸಿ ಅರಿವು ಮೂಡಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿ.ಗಿರೀಶ್‌ಚಂದ್ರ ಹೇಳಿದರು.
ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ವತಿಯಿಂದ ನಗರದ ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ, ವೇದಗಳನ್ನು ಮಕ್ಕಳು ಶ್ರದ್ಧಾಗೌರವದಿಂದ ಕಲಿಯುತ್ತಾರೆ. ಅದೇ ರೀತಿ ಪಾಠ ಮಾಡುವ ಸಂಸ್ಕೃತ ಶಿಕ್ಷಕರನ್ನೂ ಗೌರವದಿಂದ ಕಾಣುತ್ತಾರೆ. ಆದ್ದರಿಂದ ಶಿಕ್ಷಕರ ನಡೆ-ನುಡಿ ಮುಖ್ಯವಾಗಿದೆ ಎಂದರು.
ಮೈಸೂರು ವಲಯದ ವಿಷಯ ಪರಿವೀಕ್ಷಕ ವಿದ್ವಾನ್ ಮಲ್ಲಣ್ಣ ಮಾತನಾಡಿ, ಸಂಸ್ಕೃತ ಅಧ್ಯಯನ ಮಾಡುವವರಿಗೆ ಶ್ರಮ ಮತ್ತು ಏಕಾಗ್ರತೆ ಮುಖ್ಯ ಎಂದರು.
ಸಂಸ್ಕೃತ ಪದಗಳ ಬಳಕೆಯಿಂದ ಸಂಸ್ಕಾರ, ಸ್ಪಷ್ಟ ಉಚ್ಛಾರ ಬರುತ್ತದೆ. ಸಂಸ್ಕೃತದ ಪ್ರತಿ ಪದವೂ ವಿಶಿಷ್ಟ ವಿಜ್ಞಾನದ ಅರ್ಥ ನೀಡುತ್ತದೆ. ಇದು ಸಂಗೀತ, ಸಾಹಿತ್ಯ ಎರಡದಲ್ಲೂ ಹೆಚ್ಚು ಬಳಕೆಯಲ್ಲಿದೆ ಎಂದರು.
‘ಸಂಸ್ಕೃತ ಸೇವಾ ಶಿರೋಮಣಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಡಾ.ಭಾಷ್ಯಂ ಸ್ವಾಮಿ, ಸಂಸ್ಕೃತಿ ತಿಳಿದುಕೊಳ್ಳಲು ಸಂಸ್ಕೃತ ಭಾಷೆಯ ಅಧ್ಯಯನ ಅಗತ್ಯವಾಗಿದೆ. ಮಹಾಕವಿ ದಂಡಿಯು ಸಂಸ್ಕೃತವು ದೇವ ಭಾಷೆ ಎಂದಿದ್ದಾರೆ. ಸಂಸ್ಕೃತವು ಪ್ರಾಚೀನ ಭಾಷೆ. ಭಾರತೀಯ ಸಂಸ್ಕೃತಿಯ ಮೂಲ ವೇದಗಳು. ಅವು ಕೂಡ ಸಂಸ್ಕೃತದಲ್ಲಿವೆ. ವಿಶ್ವ ಸಂಸ್ಕೃತಿಯ ಪರಿಜ್ಞಾನಕ್ಕೂ ಸಂಸ್ಕೃತ ಭಾಷೆ ಬೇಕಾಗಿದೆ ಎಂದರು.
 ಸಂಸ್ಕೃತ ಶಿಕ್ಷಣ ನಿರ್ದೇಶನಾಯಲದ ನಿರ್ದೇಶಕ ಪ್ರೊ.ಸಿ.ಪಾಲಯ್ಯ, ಪ್ರಾಂಶುಪಾಲ ಡಾ.ಪಿ. ಸತ್ಯನಾರಾಯಣ, ಮೈಸೂರು ವಲಯದ ವಲಯ ಸಂಯೋಜಕ ವಿದ್ವಾನ್ ಎನ್.ಇಂದ್ರೇಶಪ್ಪ ಇನ್ನಿತರರಿದ್ದರು