- ಕಡ್ಡಾಯ ನೋಂದಣಿಗೆ ತಾಕೀತು
- ಅನಧಿಕೃತ ಕಾರ್ಯಾಚರಣೆ ಸ್ಥಗಿತಕ್ಕೆ ಸೂಚನೆ
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರು ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಅನಧಿಕೃತ ಹೋಂಸ್ಟೇಗಳಿಗೆ ತಲೆಯೆತ್ತಿವೆ. ಇವುಗಳ ಉಪಟಳಕ್ಕೆ ಕಡಿವಾಣ ಹಾಕುವುದು ಜರೂರಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಹೋಂ ಸ್ಟೇಗಳ ಕಾರ್ಯಾಚರಣೆ ಸ್ಥಗಿತಗೊಳಿಸಿ, ಹೊಸದಾಗಿ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿರುವ ಖಾಸಗಿ ಹೋಂಸ್ಟೇನಲ್ಲಿ ಇತ್ತೀಚೆಗೆ ನಡೆದ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯದ ಘಟನೆಯಿಂದ ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯೂ ಎಚ್ಚೆತ್ತುಕೊಂಡಿದೆ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರ ಸುರಕ್ಷತೆ, ಹಿತದೃಷ್ಟಿಯಿಂದ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಂಡಿದೆ.
ಮೈಸೂರು ಪ್ರವಾಸಿಗರ ಪಾಲಿನ ನೆಚ್ಚಿನ ಪ್ರೇಕ್ಷಣೀಯ ತಾಣ. ಇದು ಪ್ರವಾಸಿಗರನ್ನು ಸೂಜಿಗಲ್ಲಿನ ಸೆಳೆಯುತ್ತದೆ. ಹೀಗಾಗಿ, ಇಡೀ ರಾಜ್ಯದಲ್ಲೇ ಮೈಸೂರು ಪ್ರಮುಖ ಪ್ರವಾಸಿ ತಾಣವಾಗಿ ದೇಶ, ವಿದೇಶದಲ್ಲೂ ಹೆಸರುವಾಸಿಯಾಗಿದ್ದು, ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡಿ ಮೈಸೂರಿನ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಎರಡ್ಮೂರು ದಿನಗಳ ಕಾಲ ಅರಮನೆ ನಗರಿಯಲ್ಲೇ ಇರುವ ಪ್ರವಾಸಿಗರು ಹೋಟೆಲ್, ರೆಸಾರ್ಟ್‌ಗಳಲ್ಲಿ ಸಾಮಾನ್ಯವಾಗಿ ವಾಸ್ತವ್ಯ ಹೂಡುತ್ತಾರೆ.
ಇತ್ತೀಚಿನ ವರ್ಷದಲ್ಲಿ ಹೋಂ ಸ್ಟೇನಲ್ಲಿ ವಾಸ್ತವ್ಯ ಟ್ರೇಡ್ ಆಗಿದೆ. ಮನೆಯ ವಾತಾವರಣ, ಸ್ಥಳೀಯ ಆಹಾರ, ಸಂಸ್ಕೃತಿ, ಜೀವನಶೈಲಿ, ಸಂಪ್ರದಾಯವನ್ನು ಹತ್ತಿರದಿಂದ ತಿಳಿದುಕೊಳ್ಳುವ ಸಲುವಾಗಿ ಪ್ರವಾಸಿಗರು ಹೋಂ ಸ್ಟೇಗಳತ್ತ ಮುಖ ಮಾಡಿದ್ದು, ಜತೆಗೆ ಕ್ಯಾಂಪ್ ಫೈರ್, ನೃತ್ಯ, ಸಂಗೀತ, ರಾತ್ರಿಯಿಡೀ ಪಾರ್ಟಿಗೂ ಹೇಳಿ ಮಾಡಿಸಿದಂತಹ ಜಾಗವಾಗಿದೆ. ಇದರ ಫಲವಾಗಿ ಪಕ್ಕದ ಕೊಡಗು ಜಿಲ್ಲೆಯಂತೆ ಸಾಂಸ್ಕೃತಿಕ ಜಿಲ್ಲೆಯಲ್ಲೂ ನಾಯಿಕೊಡೆಯಂತೆ ಹೋಂ ಸ್ಟೇಗಳು ತಲೆಯೆತ್ತುತ್ತಿವೆ
. ಇವುಗಳು ನಿಯಮ, ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೆ ಕಾರ್ಯಾಚರಣೆ ನಡೆಸುತ್ತಿವೆ. ಬಹುತೇಕ ಹೋಂ ಸ್ಟೇಂಗಳು ಊರು ಹೊರಗಿನ ಪ್ರದೇಶದಲ್ಲಿ ನೆಲೆವೂರಿವೆ. ತೋಟದ ಮನೆ, ಜಮೀನು, ಫಾರಂ ಹೌಸ್, ಒಂಟಿ ಮನೆಗಳಲ್ಲಿ ಇವುಗಳು ಸದ್ದಿಲ್ಲದೆ ಮುಂದುವರಿಯುತ್ತಿವೆ. ಜನವಸತಿ, ಜನರಿಂದ ದೂರು ಇರುವ ಇವುಗಳಲ್ಲಿ ನಡೆಯುವ ಚಟುವಟಿಕೆ ಯಾರ ಅರಿವಿಗೂ ಬರುತ್ತಿಲ್ಲ, ಹೀಗಾಗಿ ಸ್ವಚ್ಛಂದವಾಗಿ ನಡೆಯುತ್ತಿವೆ. ಇದೀಗ ಇವುಗಳಿಗೆ ಮೂಗುದಾರ ಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲಾದ್ಯಂತ ಇರುವ ಹೋಂ ಸ್ಟೇಗಳ ಸುರಕ್ಷತಾ ಮಾನದಂಡ ಪರಿಶೀಲಿಸಲು ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಸಿಸಿ ಕ್ಯಾಮರಾ ಅಳವಡಿಕೆ, ಪ್ರವಾಸಿಗರ ದಾಖಲೆಗಳ ನಿರ್ವಹಣೆ ಮತ್ತು ಸಿಬ್ಬಂದಿಯ ಹಿನ್ನೆಲೆ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಜತೆಗೆ, ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳದೆ ಕಾನೂನುಬಾಹಿರವಾಗಿರುವ ಹೋಂ ಸ್ಟೇಗಳಿಗೆ ಬೀಗ ಹಾಕಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿ ಕಾರ್ಯಾಚರಣೆ ಮುಂದುವರಿಸುವ ಇವುಗಳ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಹೋಂ ಸ್ಟೇ ನಡೆಸಲು ಇಚ್ಛಿಸುವ ಮಾಲೀಕರು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ (ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳು ಇತ್ಯಾದಿ) ಅಗತ್ಯವಿರುವ ಎಲ್ಲ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ಪಡೆದುಕೊಳ್ಳಬೇಕು. ಜತೆಗೆ, ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದೂ ಜಿಲ್ಲಾಡಳಿತ ತಾಕೀತು ಮಾಡಲಾಗಿದೆ.
ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅಂತಹ ಘಟಕಗಳಲ್ಲಿ ಪ್ರವಾಸಿಗರಿಗೆ ವಸತಿ ಅವಕಾಶ ಕಲ್ಪಿಸುವುದನ್ನು ನಿಷೇಧಿಸಲಾಗಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಸುರಕ್ಷತೆಯ ದೃಷ್ಟಿಯಿಂದ ಮಾನ್ಯತೆ ಪಡೆದ ಮತ್ತು ಪರವಾನಗಿ ಹೊಂದಿರುವ ಹೋಂ ಸ್ಟೇ ಮತ್ತು ಹೋಟೆಲ್‌ಗಳಲ್ಲಿ ಮಾತ್ರ ವಾಸ್ತವ್ಯ ಹೂಡಬೇಕು. ತಂಗುವ ಮೊದಲು ಸದರಿ ವಸತಿ ಗೃಹವು ಅಧಿಕೃತವಾಗಿ ನೋಂದಣಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರವಾಸೋದ್ಯಮ ಇಲಾಖೆಯು ಪ್ರವಾಸಿಗರಿಗೆ ಸೂಚಿಸಿದೆ.
ನೋಂದಾಯಿತ ಹೋಂಸ್ಟೇಗಳ ಸಂಖ್ಯೆ 49
ಜಿಲ್ಲೆಯಲ್ಲಿ ನೋಂದಣಿಯಾಗಿ ಅನುಮೋದನೆ ಪಡೆದಿರುವ ಹೋಂ ಸ್ಟೇಗಳ ಸಂಖ್ಯೆ 49. ಈ ಪೈಕಿ ಮೈಸೂರು ತಾಲೂಕಿನಲ್ಲೇ ಅತಿ ಹೆಚ್ಚು ಹೋಂ ಸ್ಟೇಗಳಿವೆ. ಮೈಸೂರು ನಗರದ ಒಳಭಾಗ ಮತ್ತು ಹೊರಭಾಗದಲ್ಲಿ ಬರೋಬರಿ 26 ಹೋಂ ಸ್ಟೇಗಳಿವೆ.
ನಂತರ ಸ್ಥಾನದಲ್ಲಿರುವ ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲೂಕಿನಲ್ಲಿ ತಲಾ 7, ಸರಗೂರು ತಾಲೂಕಿನಲ್ಲಿ 2, ಹುಣಸೂರಿನಲ್ಲಿ 3, ನಂಜನಗೂಡಿನಲ್ಲಿ 4 ಹೋಂಸ್ಟೇಗಳಿವೆ. ತಿ.ನರಸೀಪುರ, ಕೆ.ಆರ್.ನಗರ ತಾಲೂಕಿನಲ್ಲಿ ನೋಂದಾಯಿತ, ಅನುಮತಿ ಪಡೆದ ಒಂದೇ ಒಂದು ಹೋಂ ಸ್ಟೇಗಳಿಲ್ಲ.
ಏನು ಹೇಳುತ್ತದೆ ಮಾರ್ಗಸೂಚಿ?
ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಹೋಂ ಸ್ಟೇಗಳ ಪಾತ್ರ ಮಹತ್ವದ್ದಾಗಿದೆ. ಇತ್ತೀಚೆಗೆ ನಡೆದ ಕೆಲವು ಅಪರಾಧ ಘಟನೆಗಳ ಹಿನ್ನೆಲೆಯಲ್ಲಿ ಸುರಕ್ಷತೆ, ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಬಲಪಡಿಸಲು ಕೆಲ ಮಾರ್ಗಸೂಚಿ ಜಾರಿಗೆ ತರಲಾಗಿದೆ.
ಎಲ್ಲ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ, ನೋಂದಣಿ ಪ್ರಮಾಣಪತ್ರ ಮತ್ತು ಅಗತ್ಯ ಪರವಾನಗಿಗಳನ್ನು ಮುಖ್ಯ ಪ್ರವೇಶ ದ್ವಾರದಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ಸಿಬ್ಬಂದಿಯ ಹಿನ್ನೆಲೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಿಂದ ಪರಿಶೀಲನೆ, ಅತಿಥಿಗಳ ದಾಖಲಾತಿ (ಚೆಕ್ ಇನ್/ ಚೆಕ್ ಔಟ್) ನಿರ್ವಹಣೆ, ವಿದೇಶಿ ಅತಿಥಿಗಳ ಮಾಹಿತಿಯನ್ನು ಪೊಲೀಸ್ ಇಲಾಖೆಯ ನಿಯಮಾನುಸಾರ ದಾಖಲೀಕರಣವನ್ನು ಕಡ್ಡಾಯಗೊಳಿಸಲಾಗಿದೆ.
ಕನಿಷ್ಠ 1 ಮತ್ತು ಗರಿಷ್ಠ 6 ಕೊಠಡಿಗಳು ಮಾತ್ರ ಬಾಡಿಗೆಗೆ ನೀಡಬೇಕು. ಗರಿಷ್ಠ 12 ಅತಿಥಿಗಳಿಗೆ ಮಾತ್ರ ವಸತಿ ಕಲ್ಪಿಸಬೇಕು. ಡಾರ್ಮಿಟರಿ ಅಥವಾ ಬಂಕ್ ಬೆಡ್ ವ್ಯವಸ್ಥೆಗಿಲ್ಲ ಅವಕಾಶ. ಬೆಳಗಿನ ಉಪಾಹಾರ ನೀಡುವುದು ಕಡ್ಡಾಯ. ಸ್ವಚ್ಛತೆ, ಆರೋಗ್ಯ ಮತ್ತು ಅಗ್ನಿ ಸುರಕ್ಷತಾ ನಿಯಮ ಪಾಲಿಸಬೇಕು. ರಿಸೆಪ್ಷನ್ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕನಿಷ್ಠ 30 ದಿನಗಳವರೆಗೆ ದೃಶ್ಯ ಸಂಗ್ರಹಿಸಬೇಕು.
ಸಿಬ್ಬಂದಿಗೆ ಅತಿಥಿಗಳ ಅನುಮತಿಯಿಲ್ಲದೆ ಕೊಠಡಿಗೆ ಪ್ರವೇಶಿಸಬಾರದು. ಅತಿಥಿಗಳೊಂದಿಗೆ ಅನುಚಿತವಾಗಿ ವರ್ತಿಸಬಾರದು. ಗುಪ್ತವಾಗಿ ಫೋಟೋ ಅಥವಾ ವಿಡಿಯೋ ತೆಗೆಯಬಾರದು. ಅತಿಥಿಗಳ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬಾರದು. ಅಕ್ರಮ ಚಟುವಟಿಕೆಗೆ ಅವಕಾಶ ನೀಡಬಾರದು.
ಅನುಮಾನಾಸ್ಪದ ವರ್ತನೆಯನ್ನು ನಿರ್ಲಕ್ಷಿಸಬಾರದು. ಅಲ್ಲದೆ. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ, ಮಕ್ಕಳ ಲೈಂಗಿಕ ಅಪರಾಧ ತಡೆ ಕಾಯ್ದೆ ಕುರಿತು ತರಬೇತಿ ನೀಡಿ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಲಾಗಿದೆ.
ಹಿಂದಿನ ವ್ಯವಸ್ಥೆಯಂತೆ ಸೇವಾ ಸಿಂಧು, ಸಕಾಲ ವ್ಯವಸ್ಥೆಯಡಿ ಹೋಂಸ್ಟೇಗಳು ನೋಂದಣಿ ಮಾಡಿಕೊಳ್ಳಲಾಗಿತ್ತು. ಇದೀಗ ನಮ್ಮ ಇಲಾಖೆಯ ಆನ್‌ಲೈನ್ ವೇದಿಕೆಯಲ್ಲಿ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಇದರಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಜತೆಗೆ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳಿಂದ ಎನ್‌ಒಸಿ ಪಡೆದುಕೊಳ್ಳುವುದನ್ನೂ ಕಡ್ಡಾಯಗೊಳಿಸಲಾಗಿದೆ.
— ಡಾ.ವಿ.ಎಂ.ಪ್ರಭುಸ್ವಾಮಿ ಉಪ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ