ಭಾರತ ಕಮ್ಯೂನಿಷ್ಟ್ ಪಕ್ಷ (ಸಿಪಿಐ) ವತಿಯಿಂದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು. 
ಮೈಸೂರು

ಮೈಸೂರಿನಲ್ಲಿ ಸಿಪಿಐ ಪ್ರತಿಭಟನೆ : ಶೋಷಣೆ ತಡೆಗೆ ಆಗ್ರಹ

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ಮೈಸೂರಿನಲ್ಲಿ ಸಿಪಿಐ ಪ್ರತಿಭಟನೆ
  • ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ
  • 2023ರ ಎನ್‌ಸಿಆರ್‌ಬಿ ವರದಿಯ ಪ್ರಕಾರ ದೇಶದಲ್ಲಿ ದಲಿತರ ಮೇಲೆ 57,000 ದೌರ್ಜನ್ಯ ಪ್ರಕರಣ
ಮೈಸೂರು: ದಲಿತರು ಆದಿವಾಸಿಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷ (ಸಿಪಿಐ) ವತಿಯಿಂದ ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.
ಮನುಸ್ಮತಿ ಆಧಾರದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಸ್ಥಿರಗೊಳಿಸಿ ಮನುಷ್ಯರನ್ನು ಶ್ರೇಷ್ಠ ಮತ್ತು ಕನಿಷ್ಠ ಎಂದು ವಿಭಜಿಸಲಾಗಿದೆ. ಪುರೋಹಿತಶಾಹಿ ವ್ಯವಸ್ಥೆ ಭಾರತೀಯ ಸಮಾಜವನ್ನು ಶ್ರೇಣೀಕರಿಸಿ ಜಾತಿ, ಉಪ ಜಾತಿಗಳೆಂದು ವಿಂಗಡಿಸಿ ದಲಿತ ಸಮುದಾಯದಿಂದ ಮಾನವ ಹಕ್ಕುಗಳನ್ನು ಕಸಿದುಕೊಂಡು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಂಡಿವೆ ಎಂದು ಸಿಪಿಐ ಮುಖಂಡರು ಕಿಡಿಕಾರಿದರು.
ದೇಶದಲ್ಲಿ ಶೋಷಣೆಗಳು, ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಅದರ ಬದಲಾಗಿ ಹಿಂಸೆಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ಖಂಡನೀಯ. ಜಾತಿ ತಾರತಮ್ಯವಲ್ಲದೆ, ನಮ್ಮ ದೇಶ ಮತೀಯ ಮೂಲಭೂತವಾದಕ್ಕೂ ತುತ್ತಾಗಿದ್ದು ಕೋಮುಗಲಭೆಗಳು ಸಾಕಷ್ಟು ನೆತ್ತರು ಹರಿಯುವುದಕ್ಕೆ ಕಾರಣವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
2023ರ ಎನ್‌ಸಿಆರ್‌ಬಿ ವರದಿಯ ಪ್ರಕಾರ, ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 57,000. ದಲಿತ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ 2835. ಆದರೆ ವಾಸ್ತವದಲ್ಲಿ ಪೊಲೀಸರ ಬಳಿ ದಾಖಲಾಗದಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಇನ್ನೂ ಅಧಿಕವಾಗಿದೆ. ಇಂದಿಗೂ ದಲಿತರ ಮತ್ತು ಮಹಿಳೆಯರ ವಿರುದ್ಧ ನಡೆಯುತ್ತಿರುವ ಈ ದೌರ್ಜನ್ಯಗಳಿಗೆ ಪುರೋಹಿತಶಾಹಿ ವ್ಯವಸ್ಥೆ, ಶ್ರೇಣಿಕೃತ ಸಾಮಾಜಿಕ ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆ ಮತ್ತು ಕೋಮುವಾದಿ ಮನಸ್ಥಿತಿಯೇ ಕಾರಣ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಮುಖಂಡರಾದ ಎಚ್‌ಬಿ.ರಾಮಕೃಷ್ಣ, ಕೆ.ಜಿ.ಸೋಮರಾಜೇ ಅರಸ್, ಎಂ.ಎಸ್.ಹರಿಪ್ರಸಾದ್ ಹಾಗೂ ಇತರರು ಇದ್ದರು.