ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ವಿಂಟೇಜ್ ಕಾರುಗಳ ವೈಭವ ಮತ್ತಷ್ಟು ಮೆರುಗು ನೀಡಿದೆ. ಮೈಸೂರು ಅರಮನೆಯ ಮುಂಭಾಗದಲ್ಲಿ ಸಾಲಾಗಿ ನಿಂತಿರುವ ಅಪರೂಪದ ಹಳೆಯ ಕಾರುಗಳು ಪ್ರವಾಸಿಗರನ್ನು ಹಿಂದಿನ ಕಾಲದ ರಾಜವೈಭವದ ಲೋಕಕ್ಕೆ ಕರೆದೊಯ್ಯುತ್ತಿವೆ.
ಕರ್ನಾಟಕ ವಿಂಟೇಜ್ ಅಂಡ್ ಕ್ಲಾಸಿಕ್ ಕಾರ್ ಕ್ಲಬ್ ವತಿಯಿಂದ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಸುಮಾರು 100 ವರ್ಷಗಳಷ್ಟು ಹಳೆಯದಾದ ಅಪರೂಪದ ಕಾರುಗಳು ಪ್ರಮುಖ ಆಕರ್ಷಣೆಯಾಗಿವೆ. ಒಂದು ಕಾಲದಲ್ಲಿ ಮಹಾರಾಜರು ಹಾಗೂ ಆಗರ್ಭ ಶ್ರೀಮಂತರು ಬಳಸುತ್ತಿದ್ದ ಐಷಾರಾಮಿ ಕಾರುಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬಿದ್ದಿದ್ದಾರೆ.
ವಿಲ್ಲೀಸ್ ಜೀಪ್, ಸ್ಟೂಡೆಬೇಕರ್, ವೋಕ್ಸ್ವ್ಯಾಗನ್ ಮೈಕ್ರೋ ಬಸ್, ಮೋರಿಸ್ ಹಾಗೂ ಪ್ಲೈಮೌತ್ ಸೇರಿದಂತೆ 35ಕ್ಕೂ ಹೆಚ್ಚು ಕಾರುಗಳು ಪ್ರದರ್ಶನದಲ್ಲಿವೆ. ಹಳೆಯ ಕಾಲದ ವಿಶಿಷ್ಟ ವಿನ್ಯಾಸ, ಆಕರ್ಷಕ ರೂಪ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ವಾಹನಗಳು ಕಾರು ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತಿವೆ.
ಆಧುನಿಕ ಕಾರುಗಳ ಭರಾಟೆಯ ನಡುವೆಯೂ ತಮ್ಮ ಹಳೆಯ ಸೌಂದರ್ಯವನ್ನು ಉಳಿಸಿಕೊಂಡಿರುವ ಈ ವಾಹನಗಳು ಅಂದಿನ ತಂತ್ರಜ್ಞಾನ, ವಿನ್ಯಾಸ ಮತ್ತು ಜೀವನಶೈಲಿಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುತ್ತಿವೆ. ಅರಮನೆಯ ಭವ್ಯ ಹಿನ್ನೆಲೆಯೊಂದಿಗೆ ಕಂಗೊಳಿಸುತ್ತಿರುವ ವಿಂಟೇಜ್ ಕಾರುಗಳ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳಲು ಪ್ರವಾಸಿಗರು ಉತ್ಸುಕರಾಗಿದ್ದಾರೆ.
ದಸರಾ ವೀಕ್ಷಣೆಗೆ ಆಗಮಿಸಿರುವ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತಿರುವ ಈ ವಿಂಟೇಜ್ ಕಾರುಗಳು ಅ.14 ರಂದು ಮೈಸೂರಿನ ವಿವಿಧೆಡೆ ಸಂಚರಿಸಲಿವೆ. ಹಳೆಯ ಕಾಲದ ವಾಹನಗಳ ರಾಜಗಾಂಭೀರ್ಯವನ್ನು ನಗರದ ರಸ್ತೆಗಳಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ವಾಹನ ಪ್ರಿಯರಿಗೆ ದೊರೆಯಲಿದೆ.
ಚಿತ್ರ ಸಂಖ್ಯೆ...35
ಅರಮನೆಯ ಮುಂಭಾಗದಲ್ಲಿ ಸಾಲಾಗಿ ನಿಂತಿರುವ ಅಪರೂಪದ ಹಳೆಯ ಕಾರುಗಳು.