ಹುಣಸೂರು ನಗರದ ನ್ಯಾಯಾಲಯದ ಆವರಣದಲ್ಲಿ ಕೌಟುಂಬಿಕ ಕಲಹದಿಂದ ಬೇರಾಗಿದ್ದ ದಂಪತಿ ಮತ್ತೆ ಒಂದಾದರು. ನ್ಯಾಯಾಧೀಶರಾದ ಭಾಗ್ಯಮ್ಮ, ಆಯಿಶಾಬಿ ಪಿ.ಮಜಿದ್, ನಮ್ರತಾ ಎಸ್.ಹೊಸಮಠ್ ಇತರರಿದ್ದರು.
ಹುಣಸೂರು : ನಗರದ ನ್ಯಾಯಾಲಯಗಳ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1,310 ಪ್ರಕರಣಗಳ ಇತ್ಯರ್ಥಗೊಂಡರೆ, ಕೌಟುಂಬಿಕ ಕಲಹದಿಂದ ದೂರಾಗಿದ್ದ ದಂಪತಿ ನ್ಯಾಯಾಧೀಶರ ಹಿತನುಡಿಗಳನ್ನು ಗೌರವಿಸಿ ಮತ್ತೆ ಬಾಳದೋಣಿಯಲ್ಲಿ ಒಂದಾಗಿ ಬಾಳಲು ತೀರ್ಮಾನಿಸಿದರು.
ಶನಿವಾರ ಆಯೋಜಿಸಿದ್ದ ಅದಾಲತ್‌ನಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದ ಒಟ್ಟು 1,310 ಪ್ರಕರಣಗಳು ಒಟ್ಟು 2.91 ಕೋಟಿ ರೂ.ಗಳಿಗೆ ಇತ್ಯರ್ಥವಾಯಿತು. ಈ ಪೈಕಿ ಚೆಕ್‌ಬೌನ್ಸ್ ಪ್ರಕರಣಗಳು 31(68 ಲಕ್ಷ ರೂ.) ಇತ್ಯರ್ಥವಾದರೆ, 12 ಹಣ ವಸೂಲಾತಿ ಪ್ರಕರಣಗಳು, 16 ಆಸ್ತಿವಿಭಾಗ ದಾವೆಗಳು, ಒಂದು ಮೋಟಾರು ವಾಹನ ಕಾಯ್ದೆ ಪ್ರಕರಣ ರಾಜಿ ಮೂಲಕ ಇತ್ಯರ್ಥವಾಯಿತು.
ಒಂದಾದ ದಂಪತಿ: ಮುತ್ತುರಾಯನಹೊಸಳ್ಳಿಯ ಸುಶ್ಮಿತಾ ಮತ್ತು ಕಣಗಾಲು ಗ್ರಾಮದ ರಘು ದಂಪತಿ ನಡುವೆ ಕೌಟುಂಬಿಕ ಕಲಹದ ಪರಿಣಾಮ ಸಂಸಾರದಲ್ಲಿ ಸಾಮರಸ್ಯ ಕಣ್ಮರೆಯಾಗಿತ್ತು. ಪತ್ನಿ ಸುಶ್ಮಿತಾ ತನಗೆ ಜೀವನಾಂಶ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದಾಲತ್ ಮುಂದೆ ಪ್ರಕರಣ ಬಂದಾಗ ಎಲ್ಲ ಹಿರಿಯ ಮೂವರು ನ್ಯಾಯಧೀಶರು ಅವರ ವಕೀಲರ ಸಮ್ಮುಖದಲ್ಲಿ ಸತಿಪತಿಗೆ ಬುದ್ಧಿಮಾತು ಹೇಳಿದರು. ಒಂದಾಗಿ ಬಾಳುವ ರೀತಿ, ನೀತಿಯ ಕುರಿತು ಮನಸಿಗೆ ನಾಟುವಂತೆ ಹಿತನುಡಿಗಳನ್ನು ಹೇಳಿ ಬಾಳಪಯಣವನ್ನು ಒಂದಾಗಿ ನಡೆಸುವಂತೆ ನೀಡಿದ ಸಲಹೆ ಸ್ವೀಕರಿಸಿ ಸುಶ್ಮಿತಾ ಮತ್ತು ರಘು ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದರು.
ನ್ಯಾಯಾಧೀಶರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸಿಹಿ ತಿಂದು ಕೋರ್ಟ್ ಹಾಲ್‌ನಲ್ಲಿ ನೆರೆದಿದ್ದ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ನ್ಯಾಯಧೀಶರುಗಳ ಮೊಗದಲ್ಲಿ ಸಾರ್ಥಕ್ಯ ಭಾವ ಮೂಡಿತು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶೆ ಅನಿತಾ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಧೀಶೆ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶೆ ಆಯಿಶಾಬಿ ಪಿ.ಮಜಿದ್, ಹಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.ಹೊಸಮಠ್, ವಕೀಲರು, ಕಕ್ಷಿದಾರರು ಇದ್ದರು.