- ಹಣ, ಆಭರಣಕ್ಕಾಗಿ ಅಕ್ರಮ ಬಂಧನದಲ್ಲಿಟ್ಟು ಕೃತ್ಯ
- ನಾಲ್ವರ ವಿರುದ್ಧ ಪ್ರಕರಣ ದಾಖಲು
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಚಯಸ್ಥರೇ ದಂಪತಿ ಹಾಗೂ ಮಕ್ಕಳನ್ನು ಅಪಹರಿಸಿ ಬಂಧನದಲ್ಲಿಟ್ಟು ಹಣ, ಆಭರಣ ಕಿತ್ತುಕೊಂಡಿದ್ದಾರೆ ಎನ್ನುವ ಆರೋಪದ ಮೇಲೆ ನಾಲ್ವರ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುವೆಂಪುನಗರದ ರಮ್ಯಾ, ರಾಮು, ಮಂಜುಳಾ ಸೇರಿದಂತೆ ನಾಲ್ವರ ವಿರುದ್ಧ ರಾಮಕೃಷ್ಣ ನಗರದ ಇ ಆ್ಯಂಡ್ ಎಫ್ ಬ್ಲಾಕ್‌ನ ಸುನೀತಾ, ಗಣೇಶ್ ದೂರು ನೀಡಿದ್ದಾರೆ.
ದಂಪತಿಗೆ ರಮ್ಯಾ ಈ ಮೊದಲೇ ಪರಿಚಯವಿದ್ದು, ಹಣಕಾಸು ವ್ಯವಹಾರ ಇತ್ತೆನ್ನಲಾಗಿದೆ. ಅಲ್ಲದೆ, ಬೇರೆಯವರೊಂದಿಗೂ ಹಣಕಾಸು ವ್ಯವಹಾರ ನಡೆಸಿದ್ದ ರಮ್ಯಾ, ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ಹಲವು ಕಾನೂನು ಪ್ರಕರಣ ಎದುರಿಸುತ್ತಿದ್ದರಿಂದ ತನಿಖೆಯಿಂದ ತಪ್ಪಿಸಿಕೊಳ್ಳಲು ಕೆಲ ದಿನಗಳ ಕಾಲ ಸುನೀತಾ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದಳೆನ್ನಲಾಗಿದೆ.
ಇದರಿಂದ ಸುನೀತಾ ಅವರೊಂದಿಗೆ ಆತ್ಮೀಯವಾಗಿದ್ದ ರಮ್ಯಾಗೆ, ಮನೆಯಲ್ಲಿ ಹಣ, ಆಭರಣ ಎಲ್ಲಿ ಇಟ್ಟಿದ್ದಾರೆ, ದಿನನಿತ್ಯ ಮನೆಯಲ್ಲಿ ಏನು ನಡೆಯುತ್ತದೆ ಎನ್ನುವ ಮಾಹಿತಿ ಇತ್ತು. ಈ ಮಧ್ಯೆ ಹಣಕಾಸು ವಿಷಯವಾಗಿ ಮಾತನಾಡಬೇಕು ಎಂದು ಜುಲೈ 30ರಂದು ಗಣೇಶ್ ದಂಪತಿಗೆ ಕರೆ ಮಾಡಿದ ರಮ್ಯಾ ಕುವೆಂಪುನಗರದ ಕೆಎಚ್‌ಬಿ ಕಾಲನಿಯಲ್ಲಿರುವ ಮನೆಗೆ ಕರೆಸಿಕೊಂಡಿದ್ದಾರೆ.
ಬಳಿಕ ದಂಪತಿಯನ್ನು ಕೊಠಡಿಯಲ್ಲಿ ಕೂಡಿಹಾಕಿ ಹಣ ಕೊಡುವಂತೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ಅದೇ ದಿನ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ರಮ್ಯಾ ಹಾಗೂ ಅವರೊಂದಿಗೆ ಇದ್ದವರು ದಂಪತಿಯ ಅವರ ಐದು ವರ್ಷದ ಮಗಳು ಹಾಗೂ 13 ವರ್ಷದ ಮಗನನ್ನು ಕರೆದುಕೊಂಡು ಬಂದು ಕೂಡಿ ಹಾಕಿ ಹಿಂಸೆ ನೀಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಕ್ಕಳು ಹಾಗೂ ನಮ್ಮನ್ನು ಬಿಡುಗಡೆ ಮಾಡಬೇಕಾದರೆ 20 ಲಕ್ಷ ರೂ. ನೀಡಬೇಕು. ಇಲ್ಲವಾದರೆ ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿಸುವ ಜತೆಗೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದರು. ಬಳಿಕ ನಮ್ಮ ಮನೆಗೆ ತೆರಳಿ 50 ಸಾವಿರ ರೂ. ನಗದು ಹಾಗೂ ಗಣೇಶ್ ಬಳಿ ಇದ್ದ 51 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ತೆಗೆದುಕೊಂಡು ಸಂಜೆ ಬಿಡುಗಡೆ ಮಾಡಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಕ್ಕಳು ಆತಂಕಕ್ಕೆ ಒಳಗಾಗಿದ್ದರು:
ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಕುಟುಂಬ ಹೆದರಿಕೆಯಿಂದ ಇತ್ತು. ಅಲ್ಲದೆ ಮಕ್ಕಳು ಶಾಲೆಗೆ ತೆರಳಲು ನಿರಾಕರಿಸಿದ್ದರಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಮಕ್ಕಳಿಗೆ ಸಮಾಲೋಚನೆ ನೀಡಲಾಗಿದೆ. ಈ ವೇಳೆ ನಡೆದ ಸಂಗತಿಯನ್ನು ಮಕ್ಕಳು ಹಾಗೂ ದಂಪತಿ ವಿವರಿಸಿದ್ದಾರೆ. ಇದರ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಎಸ್.ಆಶಾ ಅವರು ಕುವೆಂಪುನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗೆ ಪತ್ರ ಬರೆದು ಪ್ರಕರಣ ದಾಖಲಿಸುವಂತೆ ತಿಳಿಸಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಮೊಬೈಲ್ ಫೋನ್ ಸ್ವಿಚ್ಡ್‌ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಸ್ಥಳ ಮಹಜರು ಪ್ರಕ್ರಿಯೆ ನಡೆಸಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.