ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಪ್ರೊ.ಪುರುಷೋತ್ತಮ ಬಿಳಿಮಲೆ, ಶೈಲಜಾ ಹಿರೇಮಠ್. ಆರ್.ಮೂರ್ತಿ, ಬಿ.ಜೆ.ವಿಜಯ್‌ಕುಮಾರ್, ರಮೇಶ್, ಪುಷ್ಪಾಅಮರ್‌ನಾಥ್, ಪುಷ್ಪವಲ್ಲಿ, ಚಿಕ್ಕಣ್ಣ, ಪುಷ್ಪಲತಾ, ಮೋದಾಮಣಿ, ಅನಂತ, ಲತಾ ಸಿದ್ದಶೆಟ್ಟಿ ಇತರರಿದ್ದರು
- ಮಹಿಳೆಯರು ರಾಜಕೀಯವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ
- ಅನ್ಯಾಯಗಳನ್ನು ನೋಡಿಕೊಂಡು ಸುಮ್ಮನೆ ಕುಳಿತರೆ ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ
ಮೈಸೂರು:ಭಾರತದ ಬೌದ್ಧಿಕ ಶಕ್ತಿಯ ಸಂಕೇತವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಆಶಯವಂತೆ ಸಂವಿಧಾನಬದ್ಧವಾಗಿ ನಡೆದಾಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಬದುಕಿನಲ್ಲಿ ಅಳವಡಿಕೊಳ್ಳುವ ಸೂತ್ರ ಸಂವಿಧಾನದ ಆಶಯಗಳಿಗೆ ಅನುಗುಣವಾಗಿದ್ದರೆ ಮಾತ್ರ ನಮ್ಮ ಉಳಿಗಾಲ ಸಾಧ್ಯ. ಇಲ್ಲದೆ ಹೋದರೆ ನಾವು ಮತ್ತದೇ ಕೂಪಕ್ಕೆ ಬೀಳಬೇಕಾಗುತ್ತದೆ. ಇದನ್ನೇ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ತಿಳಿಸಿಕೊಟ್ಟಿದ್ದಾರೆ ಎಂದರು.
ಸನಾತನ ಸಂಸ್ಕೃತಿ ಎಂದು ಸಮಾಜದಲ್ಲಿ ಒಡಕುಂಟು ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವ ಇಂದಿನ ದಿನಮಾನಗಳಲ್ಲಿ ದೇಶದ ಯುವಕರು ತಮ್ಮನ್ನು ತಾವು ಸಂವಿಧಾನದ ಆಶಯಗಳ ಮೂಲಕ ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರಿಸಲು ಸಜ್ಜುಗೊಳ್ಳಬೇಕಾದ ಅನಿವಾರ್ಯತೆ ಇದೆ. ಅನ್ಯಾಯಗಳನ್ನು ನೋಡಿಕೊಂಡು ಸುಮ್ಮನೆ ಕುಳಿತರೆ ಅದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆ. ಬಲಪಂಥಿಯರು ರಾಮಾಯಣ ಮತ್ತು ಮಹಾಭಾರತವನ್ನು ಹಾಳು ಮಾಡಿದ್ದಾರೆ. ತಮಗೆ ಬೇಕಾದ ಹಾಗೆ ಕಥೆಗಳನ್ನು ಸೃಷ್ಟಿಸಿಕೊಂಡು ಬೇಕಾಬಿಟ್ಟಿಯಾಗಿ ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ನಮ್ಮ ಸಂವಿಧಾನದ ಓದುಗರು ಹೌದು ಮತ್ತು ಅಳವಡಿಸಿಕೊಳ್ಳುವರೂ ಹೌದು. ನಾವು ನಮ್ಮ ಬಗ್ಗೆ ಮಾತನಾಡುವುದು ಎಂದರೆ ನಮ್ಮಲ್ಲಿಯೇ ನಾವು ಮಾತನಾಡಿಸಿಕೊಂಡಂತೆ. ಇಷ್ಟಾಗಿಯೂ ದೇಶದಲ್ಲಿ ಪ್ರಾದೇಶಿಕ ಅಸಮಾನತೆ, ಲಿಂಗ ಅಸಮಾನತೆ, ಜಾತಿ ಅಸಮಾನತೆ ಹಲವು ಕಡೆ ಇನ್ನೂ ಉಳಿದಿದೆ ಎಂದರು.
ಭಾರತದ ಬಹುತೇಕ ಶಾಸ್ತ್ರಗಳು ಸತ್ತ ಮೇಲೆ ಹೇಗೆ ಇರಬೇಕು ಎಂದು ಹೇಳಿವುದೇ ಜಾಸ್ತಿ ಅಂಶಗಳನ್ನು ಒಳಗೊಂಡಿವೆ. ಆದರೆ ಬದುಕಿದ್ದಾಗ ಹೇಗೆ ಅರ್ಥಪೂರ್ಣವಾಗಿ ಬದುಕಬೇಕು ಎಂಬುದನ್ನು ಭಾಗಶಃ ಹೇಳಿಲ್ಲ. ಅಂಬೇಡ್ಕರ್ ಅವರು ಕರ್ಮ ಸಿದ್ಧಾಂತವನ್ನು ನಿರಾಕರಿಸಿದರು, ಆದರೆ ಕರ್ಮ ಸಿದ್ಧಾಂತ ಎಂಬ ಬಾಂಬ್ ನಮ್ಮ ದೇಶವನ್ನು ಸುಡುತ್ತಿದೆ ಹಾಗೂ ಅಸಮಾನತೆಯನ್ನು ಪ್ರತಿನಿಧಿಸುವುದಕ್ಕೆ ಭಾರತೀಯ ಸಂಸ್ಕೃತಿ ಹೇಳುತ್ತದೆ ಎಂದರು.
ಬುದ್ಧ ಧರ್ಮ ಮೋಕ್ಷ ಮಾರ್ಗವನ್ನು ಸೂಚಿಸುತ್ತದೆ ಎಂಬ ಕಾರಣಕ್ಕೆ ಅಂಬೇಡ್ಕರ್ ಸಂಶೋಧಿಸಿ ಬುದ್ಧ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ನಮ್ಮನ್ನೇ ತಿರಸ್ಕರಿಸುವ ಶಾಸ್ತ್ರಗ್ರಂಥಗಳನ್ನು ನಾವು ತಿರಸ್ಕರಿಸಬೇಕು ಎಂಬ ಕರೆ ಕೊಟ್ಟರು.
ಮಹಿಳಾ ಪ್ರಾತಿನಿಧ್ಯ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವಿಷಯವಾಗಿ ವಿಚಾರ ಮಂಡಿಸಿದ ಲೇಖಕಿ ಶೈಲಜಾ ಹಿರೇಮಠ್ ಮಾತನಾಡಿ, ಇತ್ತೀಚಿನ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವದಿಂದ ರಾಜ ಪ್ರಭುತ್ವದ ಕಡೆ ಸಾಗುತ್ತಿದೆ ಎಂದು ಭಾಸವಾಗುತ್ತದೆ. ನಮ್ಮ ದೇಶದ ಧರ್ಮಗ್ರಂಥ ನಮ್ಮ ಸಂವಿಧಾನ ಸ್ವಾತಂತ್ರ್ಯ ಪೂರ್ವದಲ್ಲಿ ಹೆಣ್ಣಿಗೆ ಎಂತಹ ವ್ಯವಸ್ಥೆ ಇತ್ತು ಎಂದು ನೋಡಬೇಕು. ನಮಗೆ ಸ್ವಾತಂತ್ರ್ಯ ಕೊಟ್ಟಿದು ಆರ್ಟಿಕಲ್ 14ರ ಮೂಲಕ ಅಂಬೇಡ್ಕರ್ ಅವರು ಎಂದರು.
ಸಮಾನತೆ ಕನಸು ಕಾಣೋ ಹಕ್ಕು ಕೂಡ ಹೆಣ್ಣು ಮಕ್ಕಳಿಗೆ ಇರಲಿಲ್ಲ, ಹೆಣ್ಣು ಪ್ರಶ್ನೆ ಕೇಳುವ ಧೈರ್ಯ ಮಾಡಬೇಕು. ಪ್ರಪಂಚದಲ್ಲಿ ಇರುವ ಅರ್ಧದಷ್ಟು ದೇಶಗಳಲ್ಲಿ ಹೆಣ್ಣು ಮಕ್ಕಳು ಪ್ರಧಾನಮಂತ್ರಿ ಆಗಿದ್ದರೆ ಇಂದಿನ ಯುದ್ಧದ ಭೀತಿಯೇ ಇರುತ್ತಿರಲಿಲ್ಲ. ಮಹಿಳೆಯರು ರಾಜಕೀಯವನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಾತನಾಡಿದರು. ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಎಸ್‌ಸಿ ಘಟಕದ ಅಧ್ಯಕ್ಷ ಸಿದ್ದರಾಜು, ನಗರ ಎಸ್‌ಸಿ ಘಟಕದ ಅಧ್ಯಕ್ಷ ರಮೇಶ್, ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್, ಮಾಜಿ ಉಪ ಮೇಯರ್ ಪುಷ್ಪವಲ್ಲಿ, ಮಾಜಿ ಮೇಯರ್‌ಗಳಾದ ನಾರಾಯಣ, ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಅನಂತ, ಜಿಪಂ ಮಾಜಿ ಸದಸ್ಯೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಎಂ.ಶಿವಣ್ಣ, ಹೆಡತಲೆ ಮಂಜುನಾಥ್, ಶಿವಪ್ರಸಾದ್, ಬಿ.ಎಂ.ರಾಮು, ಡಿ.ಈಶ್ವರ್ ಚಕ್ಕಡಿ, ಸೇವಾದಳದ ಸಾ.ಮಾ.ಯೋಗೇಶ್, ಭಾಸ್ಕರ್, ಅಶೋಕ್, ಸಿದ್ದಯ್ಯ, ಡಾ.ನಾಗರಾಜ್, ತಲಕಾಡು ಮಂಜುನಾಥ್, ತಾರಾ ಕುಮಾರ್, ಕಂದೇಗಾಲ ನಾಗೇಶ್ ಇತರರಿದ್ದರು.