ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡಮತದಾನದಿಂದ ಬಿಜೆಪಿ ಪಕ್ಷದ ನಾಯಕತ್ವದ ಮೇಲೆ ಅಥವಾ ಬಿಜೆಪಿ- ಜೆಡಿಎಸ್ ಮೈತ್ರಿ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಡ್ಡಮತದಾನ ರಾಜಕೀಯದಲ್ಲಿ ನಡೆಯುವುದು ಸಹಜ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ಕೆಲವರು ಅವರ ಪರವಾಗಿ ಮತ ಚಲಾಯಿಸಿರಬಹುದು. ಈ ರೀತಿಯ ಅಡ್ಡಮತದಾನ ನಡೆದಿರುವುದು ಇದೇ ಮೊದಲೇನು ಅಲ್ಲ. ಆದರೆ, ಅಡ್ಡಮತದಾನ ಮಾಡಿದವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಅಡ್ಡಮತದಾನ ಯಾರು ಮಾಡಿದ್ದಾರೆ ಎಂದು ತಿಳಿಯಲು ಪಕ್ಷ ಸಮಿತಿಯೊಂದನ್ನು ರಚಿಸಿದೆ. ಸಮಿತಿ ನೀಡುವ ವರದಿಯನ್ನು ಆಧರಿಸಿ ಕೇಂದ್ರದ ವರಿಷ್ಠರು ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಈ ವಿಚಾರವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಕುರಿತು ನೀಡಿರುವ ಹೇಳಿಕೆ ಕುರಿತು ಉತ್ತರ ನೀಡುವ ಅವಶ್ಯಕತೆ ಇಲ್ಲ. ರಾಜಕಾರಣಕೋಸ್ಕರ ಅವರು ಮಾತನಾಡುತ್ತಿದ್ದಾರೆ. ಅವರಿಗೆ ಕೇಳುವ ಹಕ್ಕು ಇದೆ, ಕೇಳಲಿ. ಆದರೆ, ಅವರ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದರು.
ನಗರದಲ್ಲಿ ಪಬ್‌ವೊಂದರಲ್ಲಿ ಅಗ್ನಿ ದುರಂತ ನಡೆದಿರುವ ಹಿನ್ನೆಲೆಯಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸುರಕ್ಷತೆಯ ಮಾನದಂಡಗಳನ್ನು ಎಲ್ಲರು ಪಾಲಿಸಬೇಕು. ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದರು.