ಸರಗೂರು ತಾಲೂಕಿನ ಮಾಗುಡಿಲು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಿಂದ ನಿರ್ಮಿಸಲಾದ ಬಯೋಗ್ಯಾಸ್ ಘಟಕವನ್ನು ಗಣ್ಯರು ಉದ್ಘಾಟಿಸಿದರು. ಮಲ್ಲಿಕಾರ್ಜುನ್, ಪಿ.ಡಿ.ನಾಯಕ್, ಚಿನ್ನಮಹದೇವ, ರವಿಕುಮಾರ್, ನಾಗೇಶ್, ಸುಂದರ ನಾಯಕ, ಆಶಾ ಇದ್ದರು.
- ಟೈಟಾನ್ ಕಂಪನಿಯ ಸಿಎಸ್‌ಆರ್ ಉಪವ್ಯವಸ್ಥಾಪಕ ಮಲ್ಲಿಕಾರ್ಜುನ್ ಹೇಳಿಕೆ
ತಾಲೂಕಿನ ಮಾಗುಡಿಲು ಗ್ರಾಮದಲ್ಲಿ 20 ರೈತ ಕುಟುಂಬಕ್ಕೆ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಸಹಕಾರ ನೀಡಲಾಗಿದ್ದು, ಇನ್ನೂ ಹೆಚ್ಚಿನ ಕುಟುಂಬಗಳು ಬಯೋಗ್ಯಾಸ್ ಸಹಕಾರಕ್ಕಾಗಿ ಮನವಿ ಸಲ್ಲಿಸಿವೆ. ಮುಂದಿನ ದಿನಗಳಲ್ಲಿ ಅರ್ಹ ಕುಟುಂಬಗಳಿಗೆ ಹಂತ ಹಂತವಾಗಿ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಟೈಟಾನ್ ಕಂಪನಿಯ ಸಿಎಸ್‌ಆರ್ ಉಪ ವ್ಯವಸ್ಥಾಪಕ ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವತಿಯಿಂದ ಬುಧವಾರ ಟೈಟಾನ್ ಕಂಪನಿ ಪ್ರೈವೇಟ್ ಲಿಮಿಟೆಡ್ ಸಹಕಾರದೊಂದಿಗೆ ಮಾಗುಡಿಲು ಗ್ರಾಮದಲ್ಲಿ ನಿರ್ಮಿಸಲಾದ ಬಯೋಗ್ಯಾಸ್ ಘಟಕ ಉದ್ಘಾಟಿಸಿ ಮಾತನಾಡಿದರು.
2024ರಿಂದ ಇಲ್ಲಿಯವರೆಗೆ ಸುಮಾರು 29 ಹಳ್ಳಿಗಳಲ್ಲಿ ಒಟ್ಟು 450 ಕುಟುಂಬಗಳಿಗೆ ಬಯೋಗ್ಯಾಸ್ ಸಂಪರ್ಕಕ್ಕೆ ಸಹಕಾರ ನೀಡಲಾಗಿದೆ. ಈ ಯೋಜನೆ ಪ್ರಯೋಜನ ಪಡೆದ ಕುಟುಂಬಗಳು ಬಯೋಗ್ಯಾಸನ್ನು ಸಮರ್ಪಕವಾಗಿ ಬಳಸಿಕೊಂಡು ಇಂಧನ ವೆಚ್ಚ ಕಡಿಮೆ ಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಹಸು ಹೊಂದಿರುವ ಎಲ್ಲ ಅರ್ಹ ಕುಟುಂಬಗಳು ಬಯೋಗ್ಯಾಸ್ ಸೌಲಭ್ಯ ಪಡೆಯುವಂತೆ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಜತೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ಹಿರಿಯ ವ್ಯವಸ್ಥಾಪಕ ಪಿ.ಡಿ.ನಾಯಕ್ ಮಾತನಾಡಿ, ರೈತ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ವಿವಿಧ ಕಾರ್ಯಕ್ರಮಗಳನ್ನು ಸಂಸ್ಥೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ನಮ್ಮ ಕೇಂದ್ರದಲ್ಲಿ ಹಸು ಸಾಕಣೆ ತರಬೇತಿ ಪಡೆದು ಕನಿಷ್ಠ ಎರಡು ಹಸುಗಳು ಹಾಗೂ ಖಾಲಿ ಜಾಗ ಹೊಂದಿರುವ ಕುಟುಂಬಗಳಿಗೆ ಬಯೋಗ್ಯಾಸ್ ಸೌಲಭ್ಯಕ್ಕೆ ಸಹಕಾರ ನೀಡಲಾಗುತ್ತಿದೆ. ಬಯೋಗ್ಯಾಸ್ ಬಳಕೆಯಿಂದ ಕುಟುಂಬಗಳು ಎಲ್‌ಪಿಜಿ ಖರೀದಿಗೆ ಖರ್ಚಾಗುವ ಹಣವನ್ನು ಉಳಿತಾಯ ಮಾಡುತ್ತಿರುವುದು ಸಮುದಾಯದ ಅಭಿವೃದ್ಧಿಗೆ ಉತ್ತಮ ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದ ವ್ಯವಸ್ಥಾಪಕ ಚಿನ್ನಮಹದೇವ, ಪ್ಲೇಸ್ಮೆಂಟ್ ವ್ಯವಸ್ಥಾಪಕ ರವಿಕುಮಾರ್ ಪಿ.ಜಿ, ಸಂಯೋಜಕ ನಾಗೇಶ್, ಕ್ಷೇತ್ರ ಮಾರ್ಗದರ್ಶಕ ಸುಂದರ ನಾಯಕ, ಮಾಗುಡಿಲು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆಶಾ, ಬಯೋಗ್ಯಾಸ್ ಸೌಲಭ್ಯ ಪಡೆದ ಕುಟುಂಬ ಸದಸ್ಯರು ಇದ್ದರು.