ಬೆಟ್ಟದಪುರದ ಐತಿಹಾಸಿಕ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ಮಾತನಾಡಿದರು. 
ಮೈಸೂರು

ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಯಶಸ್ವಿಗೆ ಸಹಕರಿಸಿ

ಪ್ರಮುಖ ಮುಖ್ಯಾಂಶಗಳು

  • ಉಪ ವಿಭಾಗಾಧಿಕಾರಿ ಕಾವ್ಯರಾಣಿ ಮನವಿ
ಬೆಟ್ಟದಪುರ: ಬೆಟ್ಟದಪುರದ ಐತಿಹಾಸಿಕ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಹಾಗೂ ರಥೋತ್ಸವದ ಯಶಸ್ವಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹುಣಸೂರು ಉಪವಿಭಾಗಾಧಿಕಾರಿ ಕಾವ್ಯರಾಣಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಐತಿಹಾಸಿಕ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಸಂಬಂಧ ಬುಧವಾರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ನಡೆಯುವ ಜಾನುವಾರು ಜಾತ್ರೆ, ರಥೋತ್ಸವಗಳು ತಲಾತಲಾಂತರಗಳಿಂದ ವಿಶೇಷವಾಗಿದ್ದು, ಅದಕ್ಕೆ ಆದ ಮಹತ್ವ ಹೊಂದಿವೆ. ಅವುಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಮೂಲಕ ಯಶಸ್ವಿಯಾಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸಭೆಯಲ್ಲಿ ಸೂಚಿಸಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಭಕ್ತರಿಗೆ ಹಾಗೂ ಸ್ಥಳೀಯರಿಗೆ ಯಾವುದೇ ಸಮಸ್ಯೆಯಾಗದಂತೆ ಸಮನ್ವಯದಿಂದ ಕೆಲಸ ನಿರ್ವಹಿಸುವ ಮೂಲಕ ಕರ್ತವ್ಯಪಾಲನೆ ಮಾಡಬೇಕು. ವಿದ್ಯುತ್ ದೀಪ ಅಲಂಕಾರ, ಸ್ವಚ್ಛತೆ ಹಾಗೂ ನೈರ್ಮಲ್ಯತೆ, ಆರೋಗ್ಯ, ಸುರಕ್ಷತೆ, ಪಶು ಆರೋಗ್ಯ, ಬಂದೋಬಸ್ತ್, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಜಾತ್ರಾ ಸಂಬಂಧ ವಿವಿಧ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿರುವ ಕೆಲಸಗಳನ್ನು ತಪ್ಪದೆ ಪಾಲನೆ ಮಾಡಬೇಕು ಎಂದರು.
ತಹಸೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ, ಜ.23 ರಿಂದ ಜ.27ರವರೆಗೆ ಜಾನುವಾರು ಜಾತ್ರೆ ಹಾಗೂ ಫೆ.2 ಗಿರಿಜಾ ಕಲ್ಯಾಣೋತ್ಸವ ಮತ್ತು ಫೆ.3 ರಂದು ಭ್ರಮರಾಂಬ ಸಮೇತ ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನೆರವೇರಲಿದೆ. ಈಗಾಗಲೇ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಕರ್ತವ್ಯದ ಹಾಗೂ ಕೆಲಸದ ಬಗ್ಗೆ ತಿಳಿಸಲಾಗಿದ್ದು, ಸಂಬಂಧಪಟ್ಟವರಿಗೆ ಪತ್ರ ರವಾನೆ ಮಾಡಲಾಗುವುದು. ಎಲ್ಲರೂ ಒಗ್ಗೂಡಿ ಐತಿಹಾಸಿಕ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಸಭೆಯಲ್ಲಿ ಚರ್ಚೆ: ಸಭೆಯಲ್ಲಿ ಬೆಟ್ಟಕ್ಕೆ ದೀಪಾಲಂಕಾರ, ಗ್ರಾಮದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ, ಭಕ್ತರ ಅನುಕೂಲಕ್ಕೆ ಶೌಚಗೃಹ ವ್ಯವಸ್ಥೆ, ಜಾನುವಾರು ಜಾತ್ರೆ ಸಂಬಂಧ ಜಾನುವಾರು ಸುರಕ್ಷತೆ ಇತರ ದೃಷ್ಟಿಯಿಂದ ಪಶು ಕ್ಲಿನಿಕ್, ಭಕ್ತರ ಆರೋಗ್ಯದ ದೃಷ್ಟಿಯಿಂದ ಸ್ಥಳೀಯವಾಗಿ ಹಾಗೆ ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ಹಾಗೂ ಆಂಬುಲೆನ್ಸ್, ಕುಡಿಯುವ ನೀರಿನ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್, ಗ್ರಾಮದಲ್ಲಿ ದೀಪಾಲಂಕಾರ ವ್ಯವಸ್ಥೆಗಳು ಸೇರಿದಂತೆ ವಿವಿಧ ಬೇಡಿಕೆ ಹಾಗೂ ಆಯೋಜನೆ ಬಗ್ಗೆ ಸ್ಥಳೀಯ ಮುಖಂಡರು ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸತೀಶ್ ಕಶ್ಯಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಲೋಕೋಪಯೋಗಿ ಇಲಾಖೆಯ ಎಇಇ ಎಂ.ಆರ್ ವೆಂಕಟೇಶ್, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಪಿಎಸ್‌ಐ ಸ್ವಾಮಿನಾಯಕ್, ಸೆಸ್ಕ್ ಎಇಇ ಪ್ರಶಾಂತ್, ವೈದ್ಯಾಧಿಕಾರಿ ಡಾ.ಪೂಜಾ, ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ಮಂಜುನಾಥ್, ವೀಣಾ, ಉಪತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಸಂದೀಪ್ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.