ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಚೇರಿ ಎದುರು ಗುತ್ತಿಗೆ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. ಚಂದ್ರಶೇಖರ್ ಮೇಟಿ, ಎಂ.ಉಮಾದೇವಿ, ಎಸ್.ಎಚ್.ಹರೀಶ್, ಯಶೋಧರಾ, ಪಿ.ಎಸ್.ಸಂಧ್ಯಾ, ಎಐಕೆಕೆಎಂಎಸ್ ರೈತ ಸಂಘಟನೆಯ ಉಪಾಧ್ಯಕ್ಷ ಎಚ್.ಶಿವಪ್ರಕಾಶ್ ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು. 
ಮೈಸೂರು

ಬಾಕಿ ವೇತನ ಪಾವತಿಗೆ ಆಗ್ರಹಿಸಿ ಗುತ್ತಿಗೆ ನೌಕರರ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಕಿರುಕುಳ ನಿಲ್ಲಿಸಲು ಕಾರ್ಮಿಕರ ಒತ್ತಾಯ
  • ಎಂಎಂಸಿ ಮತ್ತು ಆರ್‌ಐ ಯುನೈಟೆಡ್ ಕಾಂಟ್ರಾೃಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ

ಮೈಸೂರು: 

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಬಾಕಿ ಇರುವ ಮೂರು ತಿಂಗಳ ವೇತನ ಪಾವತಿಸಬೇಕು, ಸ್ವಯಂಘೋಷಿತ ಮೇಲ್ವಿಚಾರಕರ ಹೆಸರಿನಲ್ಲಿ ಕಾರ್ಮಿಕರಿಗೆ ಕೊಡುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿಗೆ ಸಂಯೋಜಿತವಾಗಿರುವ ಎಂಎಂಸಿ ಮತ್ತು ಆರ್‌ಐ ಯುನೈಟೆಡ್ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಯಿತು.

ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆ ನೌಕರರಿಗೆ ಪಿಎಫ್, ಇಎಸ್‌ಐ ಸೌಲಭ್ಯವನ್ನು ಸರಿಯಾಗಿ ಪಾವತಿ ಮಾಡುತ್ತಿಲ್ಲ. ವೇತನ ಚೀಟಿ ಸಹ ಕೊಡುತ್ತಿಲ್ಲ. ಸಮವಸ್ತ್ರ ನೀಡದೆ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಈ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಕಿಡಿಕಾರಿದರು.
ಕಾನೂನು ಪ್ರಕಾರ, 20 ದಿನಗಳ ಹಿಂದೆಯೇ ಮುಷ್ಕರದ ನೋಟಿಸ್ ನೀಡಿದರೂ ಸಹ ಆಡಳಿತ ಮಂಡಳಿಯು ಸಮಸ್ಯೆ ಪರಿಹರಿಸುವಲ್ಲಿ ಅಥವಾ ಕಾರ್ಮಿಕರೊಂದಿಗೆ ಚರ್ಚೆ ಮಾಡುವುದರಲ್ಲಿ ವಿಫಲವಾಗಿದೆ. ಹೀಗಾಗಿ, ಅನಿವಾರ್ಯವಾಗಿ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಮೇಟಿ ಮಾತನಾಡಿ, ಏಜೆನ್ಸಿಗಳ ವತಿಯಿಂದ ಡಿ ಗ್ರೂಪ್ ಹೆಸರಿನಲ್ಲೇ ಕೆಲಸ ಮಾಡುವ ಕೆಲವು ಸ್ವಯಂ ಘೋಷಿತ ಮೇಲ್ವಿಚಾರಕರ ಕಿರುಕುಳದಿಂದಾಗಿ ಕಾರ್ಮಿಕರು ಬೇಸತ್ತಿದ್ದಾರೆ. ಸಕಾಲಕ್ಕೆ ಸಂಬಳ ನೀಡಲು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ. ಆಡಳಿತ ಮಂಡಳಿಯ ತೀವ್ರ ನಿರ್ಲಕ್ಷೃವೂ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯ ಸಂಯುಕ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ಎಂ.ಉಮಾದೇವಿ, ಸಂಘದ ಕಾರ್ಯದರ್ಶಿ ಎಸ್.ಎಚ್.ಹರೀಶ್, ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಯಶೋಧರಾ, ಜಿಲ್ಲಾ ಸಮಿತಿ ಸದಸ್ಯೆ ಪಿ.ಎಸ್.ಸಂಧ್ಯಾ, ಎಐಕೆಕೆಎಂಎಸ್ ರೈತ ಸಂಘಟನೆಯ ಉಪಾಧ್ಯಕ್ಷ ಎಚ್.ಶಿವಪ್ರಕಾಶ್, ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು.