ಪಿರಿಯಾಪಟ್ಟಣದ ವಕೀಲರ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲ ಕೆ.ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. ಎಂ.ರಾಜು, ಎಂ.ಆರ್.ಯೋಗೀಶ್, ಶ್ವೇತಾ, ಧನಪಾಲ್ ಇತರರು ಇದ್ದರು.
- ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯ
ಪಿರಿಯಾಪಟ್ಟಣ: ಶ್ರೇಷ್ಠ ವೃತ್ತಿ ಎಂದು ಪರಿಗಣಿಸಲಾಗಿರುವ ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಲು ಸತತ ಅಧ್ಯಯನ ಮತ್ತು ತಾಳ್ಮೆ ಮುಖ್ಯ ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ರಾಜು ಅಭಿಪ್ರಾಯಪಟ್ಟರು.
ಪಟ್ಟಣದ ವಕೀಲರ ಭವನದಲ್ಲಿ ವಕೀಲರ ಸಂಘ ಇತ್ತೀಚೆಗೆ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಮತ್ತು ವಕೀಲರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ವೃತ್ತಿಗೆ ಸ್ವಇಚ್ಛೆಯಿಂದ ಬರುವವರಿಗಿಂತ ಬೇರೆ ಕಡೆ ಅವಕಾಶ ಸಿಗಲಿಲ್ಲ ಎಂಬ ಕಾರಣದಿಂದ ಬರುವವರೇ ಹೆಚ್ಚಾಗಿದ್ದು, ವೃತ್ತಿ ಸ್ವೀಕರಿಸಿದ ನಂತರ ಇದನ್ನು ಗಂಭೀರವಾಗಿ ಪರಿಗಣಿಸಿ ವಕೀಲಿಕೆ ನಡೆಸಿದರೆ ಉತ್ತಮ ಜೀವನ ರೂಪಿಸಿಕೊಳ್ಳುವ ಜತೆಗೆ ಉನ್ನತ ಹುದ್ದೆಗೆ ಏರಲು ಸಹ ಅವಕಾಶಗಳಿವೆ ಎಂದರು.
ಪ್ರಾರಂಭದಲ್ಲಿ ವೃತ್ತಿಯ ಬಗ್ಗೆ ಗೊಂದಲ, ತುಮುಲ, ಸಮಸ್ಯೆಗಳಿರುವುದು ಸಹಜ ಇದೆಲ್ಲವನ್ನು ಮೆಟ್ಟಿ ನಿಂತರೆ ಖಂಡಿತ ಯಶಸ್ಸು ಸಾಧ್ಯ. ಗ್ರಾಮೀಣ ಪ್ರದೇಶದ ವಕೀಲರು ವೃತ್ತಿಯ ಜತೆಗೆ ಕೃಷಿಯ ಮೇಲಿನ ಅವಲಂಬನೆ ಸಹ ಇರುವುದರಿಂದ ಸತತ ಅಧ್ಯಯನದಿಂದ ವಿಮುಖರಾಗಬಾರದು. ಕಾನೂನು ಕ್ಷೇತ್ರ ಸಮುದ್ರವಿದ್ದಂತೆ, ಇಲ್ಲಿ ಆಳಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಕಲಿಯುವ ಅವಕಾಶವಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೀಶ್ ಮಾತನಾಡಿ ವಕೀಲರು ಸತತ ಅಧ್ಯಯನದ ನಂತರ ಸಂಪಾದನೆ ಎಂಬ ತತ್ವದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ, ಉತ್ತಮ ಸಮವಸ್ತ್ರ ಧರಿಸುವುದರಿಂದ ಗೌರವ ಸಿಗುವ ಜತೆಗೆ ನ್ಯಾಯಾಲಯದಲ್ಲಿ ಸಹ ಒಳ್ಳೆಯ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ವೇತಾ ಮಾತನಾಡಿ, ವಕೀಲ ವೃತ್ತಿ ನಮಗೆ ನ್ಯಾಯ ಒದಗಿಸಲು ಶಕ್ತಿ ನೀಡಿದೆ. ಕಿರಿಯ ವಕೀಲರು ನ್ಯಾಯಾಲಯದಲ್ಲಿ ಕಲಾಪವನ್ನು ಗಂಭೀರವಾಗಿ ವೀಕ್ಷಿಸಿ, ಸಂಶಯವಿದ್ದಲ್ಲಿ ಹಿರಿಯ ನ್ಯಾಯಾಧೀಶರ ಸಲಹೆ ಪಡೆಯುವ ಮೂಲಕ ಹಾಗೂ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ಹೊಸ ತೀರ್ಪುಗಳು ಬರುತ್ತಿದ್ದು ಅವುಗಳನ್ನು ತಿಳಿಯುವ ಮೂಲಕ ಉತ್ತಮ ವಕೀಲರಾಗಿ ರೂಪುಗೊಳ್ಳಿ ಎಂದು ಸಲಹೆ ನೀಡಿದರು.
ವಕೀಲ ಕೆ.ಮಹದೇವಪ್ಪ ಅವರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಧನಪಾಲ್, ವಕೀಲರಾದ ಗೋವಿಂದಗೌಡ, ಕೆ.ಎ.ಮಹದೇವಪ್ಪ, ಮಾತನಾಡಿದರು. ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಶಂಕರ್, ಖಜಾಂಚಿ ಹರೀಶ್, ಉಪಾಧ್ಯಕ್ಷ ಚಂದ್ರೇಗೌಡ, ಸಹಕಾರ್ಯದರ್ಶಿ ಗುರುಪ್ರಸಾದ್, ಎಪಿಪಿಗಳಾದ ಶಿವಶಂಕರ್ ಗಾಂವ್ಕರ್, ಉಮಾಲಕ್ಷ್ಮೀ, ಜಾನಕಿ ಸೇರಿದಂತೆ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.