ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು
- ಶಿಬಿರಾರ್ಥಿಗಳಿಗೆ ಪಾಲಿಕೆ ಹೆಚ್ಚುವರಿ ಆಯುಕ್ತೆ ಬಿ.ಎಂ.ವೀಣಾ ಸಲಹೆ
- ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗುರುವಾರ ಆಯೋಜಿಸಿದ್ದ ತರಬೇತಿ ಶಿಬಿರ
ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಸಮರ್ಪಣೆಯೊಂದಿಗೆ ನಿರಂತರ ಅಭ್ಯಾಸ ಅತ್ಯಗತ್ಯ ಎಂದು ಮೈಸೂರು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಬಿ.ಎಂ.ವೀಣಾ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿಯಲ್ಲಿ ಕಾವೇರಿ ಸಭಾಂಗಣದಲ್ಲಿ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗುರುವಾರ ಆಯೋಜಿಸಿದ್ದ ತರಬೇತಿ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತು ಸಾಗರದಂತೆ. ಇವತ್ತಿನ ಸ್ಪರ್ಧಾತ್ಮಕ ಪರೀಕ್ಷೆ ಸಹ ಮೊದಲಿನಂತಿಲ್ಲ. ಪ್ರಶ್ನೆ ಪತ್ರಿಕೆ ಮಾದರಿ ಬದಲಾಗಿದೆ. ಇದೆಲ್ಲದಕ್ಕೂ ನೀವು ಸಿದ್ಧರಾಗಿರಬೇಕು. ನಿರಂತರ ಅಭ್ಯಾಸ ಇಟ್ಟುಕೊಂಡು ಸತತವಾಗಿ ಕಠಿಣ ಪರಿಶ್ರಮ ಪಡಿ, ಪರಿಶ್ರಮ ಇಲ್ಲದಿದ್ದರೆ ಯಾವ ಪರೀಕ್ಷೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.
ಓದುವಾಗ ಯಾವುದನ್ನೂ ಓದಬೇಕು. ಯಾವುದನ್ನು ಓದಬಾರದು ಎನ್ನುವುದನ್ನು ತಿಳಿದುಕೊಂಡರೆ ಉತ್ತಮ. ಪ್ರತಿದಿನ ಪತ್ರಿಕೆ ಓದಿ. ನಾಲ್ಕೈದು ವರ್ಷಗಳ ಸಾಮಾನ್ಯ ಜ್ಞಾನ ನಿಮಗೆ ತಿಳಿದಿರಲಿ ಎಂದು ಹೇಳಿದರು.
ಓದಲು ಸಮಯ ಇಟ್ಟುಕೊಂಡು ಕೂತಾಗ ಬೇರೆ ಕೆಲಸಗಳ ಬಗ್ಗೆ ಗಮನ ಬೇಡ. ಊರಿನ ಹಬ್ಬ, ಸಂಬಂಧಗಳು, ಹುಟ್ಟುಹಬ್ಬ ಹೀಗೆ ಎಲ್ಲವನ್ನೂ ಬಿಟ್ಟು ಕಠಿಣ ಪರಿಶ್ರಮಪಡಬೇಕು. ಕನಿಷ್ಠ ಮೂರು ವರ್ಷ ನೀವು ಕಷ್ಟಪಟ್ಟರೆ, ಮುಂದಿನ 30 ವರ್ಷ ಸುಖವಾಗಿರಬಹುದು ಎಂದು ಹೇಳಿದರು.
ಓದುವಾಗ ಯಾವಾಗಲೂ ಒಬ್ಬ ವ್ಯಕ್ತಿಯನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಬೇಕು. ಆವಾಗ ನಿಮಗೆ ಓದಲು ಆಸಕ್ತಿ ಹೆಚ್ಚಾಗುತ್ತದೆ. ನಾವೆಲ್ಲ ಓದುವಾಗ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಹೆಚ್ಚಾಗಿ ಅನುಸರಿಸುತ್ತಿದ್ದೆವು. ಅವರಂತೆ ನಾವಾಗಬೇಕು ಎಂದುಕೊಳ್ಳುತ್ತಿದ್ದೆ. ಇದೀಗ ಅವರಂತೆ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಕರಾಮುವಿಯ ಈ ತರಬೇತಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ನಿಮಗೂ ಸಾರ್ವಜನಿಕ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ ಎಂದು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ ಎಂ. ಬಾಲಸುಬ್ರಹ್ಮಣ್ಯ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎನ್ನುವುದು ದೂರದ ಪಯಣ ಇದ್ದಂತೆ. ಇಲ್ಲಿ ಪರಿಶ್ರಮ ಮುಖ್ಯ.
ಪರೀಕ್ಷೆಗೆ ತಯಾರಿ ನಡೆಸುವಾಗ ಓದುವುದರ ಜತೆಗೆ ನೋಟ್ಸ್ ಮಾಡಿಟ್ಟುಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆ ಓದಿ, ವಿಶ್ಲೇಷಿಸಿ. ನಿಮಗೆ ಹೇಗೆ ಅನುಕೂಲವಾಗುತ್ತದೆಯೋ ಹಾಗೆಯೇ ಅಭ್ಯಾಸ ಮಾಡಿ ಜತೆಗೆ ಸಂವಹನ ಕೌಶಲ ಅಳವಡಿಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಎಷ್ಟು ಗಂಟೆಗಳ ಕಾಲ ಓದುತ್ತೀರಿ, ಹೇಗೆ ಓದುತ್ತೀರಿ ಎನ್ನುವುದು ಮುಖ್ಯ ಎಂದ ಅವರು ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಬಗ್ಗೆ ತಿಳಿಸಿಕೊಟ್ಟು ಶುಭಕೋರಿದರು.
ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಮಾತನಾಡಿ, ಧೈರ್ಯ ಇದ್ದರೆ ಏನನ್ನಾದರೂ ಸಾಧಿಸಬಹುದು. ಸಮಾಜದಲ್ಲಿ ನ್ಯಾಯಯುತ ಬದುಕು ಕಟ್ಟಿಕೊಳ್ಳಬೇಕು. ಇದಕ್ಕೆ ಗುರಿ ಇಟ್ಟುಕೊಳ್ಳಿ. ಏನನ್ನಾದರೂ ಸಾಧಿಸಲು ಸತತ ಪ್ರಯತ್ನ ಮಾಡಬೇಕು. ಅರಿವೇ ಗುರು ಎನ್ನುವ ಹಾಗೆ ನಿಮ್ಮನ್ನು ನೀವು ನಂಬಿ. ಆ ನಂಬಿಕೆ ಜೀವನ ಪರ್ಯಂತ ಇರಲಿ ಎಂದರು.
ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್, ಶೈಕ್ಷಣಿಕ ಡೀನ್ ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಗಣೇಶ್ ಕೆ.ಜಿ.ಕೊಪ್ಪಲ್ ಇನ್ನಿತರರು ಇದ್ದರು.