ನಗರದ ಎಂಜಿ ರಸ್ತೆಯಲ್ಲಿ ಗುರುವಾರ ಕೈಗೊಂಡಿದ್ದ ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆ. 
ಮೈಸೂರು

ಮುಂದುವರಿದ ಫುಟ್‌ಪಾತ್ ಒತ್ತುವರಿ ತೆರವು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಜೆಸಿಬಿ ಮೂಲಕ ಕಾರ್ಯಾಚರಣೆ
  • ಪಾಲಿಕೆ ಅಧಿಕಾರಿಳ ಜತೆ ವರ್ತಕರ ವಾಗ್ವಾದ
ಮೈಸೂರು: ಮೈಸೂರು ಮಹಾನಗರಪಾಲಿಕೆ ಕೈಗೊಂಡಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಗುರುವಾರವೂ ಮುಂದುವರಿದಿದ್ದು, ರಸ್ತೆ ಬದಿಯ ಕಾಲುದಾರಿಯಲ್ಲಿರುವ ಅಡೆತಡೆಗಳನ್ನು ಕಿತ್ತುಹಾಕಲಾಯಿತು.
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಫುಟ್‌ಪಾತ್ ಅತಿಕ್ರಮಣವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಚುರುಕಿನಿಂದ ಈ ಕಾರ್ಯಾಚರಣೆ ನಡೆಸುತ್ತಿದೆ.
ಪಾಲಿಕೆಯ ವಲಯ ಕಚೇರಿಯ ಅಭಿವೃದ್ಧಿ ಅಧಿಕಾರಿ ಎನ್.ಎಸ್.ಚೇತನ ನೇತೃತ್ವದಲ್ಲಿ ನಗರದ ಮಹಾತ್ಮ ಗಾಂಧಿ ರಸ್ತೆ, ವಾಣಿ ವಿಲಾಸ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಯಿತು. ಪಾದಚಾರಿ ಮಾರ್ಗದಲ್ಲಿ ಒತ್ತುವರಿಗೆ ಮಾಡಿಕೊಂಡು ನಿರ್ಮಿಸಲಾಗಿದ್ದ ಮೆಟ್ಟಿಲುಗಳು, ನಾಮಫಲಕಗಳು, ಶಿಟ್‌ನ ತಗಡುಗಳು, ಗೋಡೆಗಳನ್ನು ಜೆಸಿಬಿ ಯಂತ್ರ ಸಹಾಯದಿಂದ ತೆರವುಗೊಳಿಸಲಾಯಿತು. 
ನಗರದ ಎಂ.ಜಿ.ರಸ್ತೆಯಲ್ಲಿ ಜೆಎಸ್‌ಎಸ್ ಆಸ್ಪತ್ರೆಯ ಮುಂಭಾಗ ಬಳಿಯಿಂದ ಪಾಲಿಕೆ ಅಧಿಕಾರಿಗಳು ಮತ್ತು ‘ಅಭಯ’ ತಂಡವು ಕಾರ್ಯಾಚರಣೆ ಆರಂಭಿಸಿತು. ಪಾದಚಾರಿ ಮಾರ್ಗದಲ್ಲಿ ಹೋಟೆಲ್, ಅಂಗಡಿ ಮಳಿಗೆಗಳ ಮುಂಭಾಗ ಇರಿಸಲಾಗಿದ್ದ ವಸ್ತುಗಳನ್ನು ತೆಗೆದು ಹಾಕಲಾಯಿತು. ನಾಮಫಲಕಗಳು, ಫ್ಲೆಕ್ಸ್, ಪೋಸ್ಟರ್, ಶಿಟ್‌ಗಳನ್ನೂ ಜಪ್ತಿ ಮಾಡಲಾಯಿತು. ಈ ವೇಳೆ ಪಾಲಿಕೆಯ ಅಧಿಕಾರಿಗಳೊಂದಿಗೆ ಕೆಲ ವರ್ತಕರು ವಾಗ್ವಾದ ನಡೆಸಿದರು. 
ಪಾದಚಾರಿ ಮಾರ್ಗಗಳಲ್ಲಿ ಯಾವುದೇ ವಸ್ತುಗಳನ್ನು ಇಡಬಾರದು. ತಪ್ಪಿದ್ದಲ್ಲಿ ತೆರವು ಮಾಡಲಾಗುವುದು ಎಂದು ಅಂಗಡಿಯವರಿಗೆ ಮೊದಲೇ ಸೂಚನೆ ನೀಡಲಾಗಿತ್ತು. ಹೀಗಾಗಿ, ಕಾರ್ಯಾಚರಣೆ ಸಂದರ್ಭದಲ್ಲಿ ಹೆಚ್ಚಿನ ಗೊಂದಲ ಉಂಟಾಗಲಿಲ್ಲ.
ವಾಣಿ ವಿಲಾಸ ಮಾರುಕಟ್ಟೆಯ ಬಳಿಯ ಮಳಿಗೆಗಳು ಮುಂದೆ ಇರಿಸಲಾಗಿದ್ದ ವಸ್ತುಗಳನ್ನು ಮಳಿಗೆದಾರರು ಎತ್ತುಕೊಂಡು ಸಹಕಾರ ನೀಡಿದರು. ಜೆರಾಕ್ಸ್ ಅಂಗಡಿಗಳ ಮುಂಭಾಗ ನಿರ್ಮಿಸಲಾಗಿದ್ದ ಮೆಟ್ಟಿಲುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಗಣಪತಿ ದೇವಸ್ಥಾನ ಪಕ್ಕದ ಕೆ.ಆರ್.ಪೊಲೀಸ್ ಠಾಣೆಯ ಹೊಂದಿಕೊಂಡಿರುವ ದೊಡ್ಡದಾದ ವಾಣಿಜ್ಯ ಕಟ್ಟಡದ ಮುಂಭಾಗ ಪಾದಚಾರಿ ಮಾರ್ಗಕ್ಕೆ ನಿರ್ಮಿಸಲಾದ ಮೆಟ್ಟಿಲುಗಳನ್ನು ಹಾರೆ ಮತ್ತು ಜೆಸಿಬಿ ಮೂಲಕ ಕಿತ್ತು ಹಾಕಲಾಯಿತು. ಆದರೆ, ಈ ಕಾರ್ಯಾಚರಣೆಯಲ್ಲಿ ವ್ಯಾಪಾರಿಗಳು ಪಾಲಿಕೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿದರು. 
ವಾಗ್ವಾದ: ನಮಗೆ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಒಬ್ಬೊರಿಗೆ ಒಂದೊಂದು ರೀತಿ ಕ್ರಮ ವಹಿಸಲಾಗುತ್ತಿದೆ. ಎಲ್ಲರಿಗೂ ಒಂದೇ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಧ್ಯ ಪ್ರವೇಶಿಸಿದ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಫುಟ್‌ಪಾತ್ ಒತ್ತುವರಿ ತೆರವಿಗೆ ಯಾವ ನೋಟಿಸ್ ನೀಡುವಂತಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದರು. ಬಳಿಕ ವರ್ತಕರು ಸುಮ್ಮನಾದರು.