ಸಾ.ರಾ.ಮಹೇಶ್ 
ಮೈಸೂರು

ಕೆ.ಆರ್.ನಗರದಲ್ಲಿ ಸ್ಪರ್ಧೆ; ಕ್ಷೇತ್ರ ಬದಲಿಸಲ್ಲ: ಸಾ.ರಾ.ಮಹೇಶ್

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ನಾನು ಬದುಕಿರುವವರೆಗೂ ನನ್ನ ಕುಟುಂಬದ ಯಾರೊಬ್ಬರು ಚುನಾವಣೆಗೆ ಸ್ಪರ್ಧಿಸಲ್ಲ.
  • ಒಂದು ವೇಳೆ ಸ್ಪರ್ಧಿಸಿದರೆ ನಾನು ಆ ದಿನವೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ
  • ಚಾಮುಂಡೇಶ್ವರಿ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯೇ ಸ್ಪರ್ಧೆ
ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಲ್ಲಿ ಮಾತ್ರವೇ ಸ್ಪರ್ಧಿಸುವೆ. ಯಾವುದೇ ಕಾರಣಕ್ಕೂ  ಕ್ಷೇತ್ರ ಬದಲಿಸಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.
ಸಾ.ರಾ.ಮಹೇಶ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ರಾಜಕೀಯ ಹುಟ್ಟು-ಸಾವು ಎರಡೂ ಕೆ.ಆರ್. ನಗರ ಕ್ಷೇತ್ರದಲ್ಲಿ ಮಾತ್ರ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
 ಹಾಗೆಯೇ ನಾನು ಬದುಕಿರುವವರೆಗೂ ನನ್ನ ಕುಟುಂಬದ ಯಾರೊಬ್ಬರು ಚುನಾವಣೆಗೆ ಸ್ಪರ್ಧಿಸಲ್ಲ. ಒಂದು ವೇಳೆ ಸ್ಪರ್ಧಿಸಿದರೆ ನಾನು ಆ ದಿನವೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿಯೇ ಸ್ಪರ್ಧಿಸಲಿದ್ದಾರೆ. ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನವನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಸರ್ಕಾರದಿಂದಲೇ ಭ್ರಷ್ಟ ಅಧಿಕಾರಿಗಳ ರಕ್ಷಣೆ 

ರಾಜ್ಯ ಸರ್ಕಾರವು ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಸಾ.ರಾ.ಮಹೇಶ್ ದೂರಿದರು.
ವ್ಯಭಿಚಾರ, ದರೋಡೆ, ಭ್ರಷ್ಟಾಚಾರ ಮೂರರಲ್ಲೂ ಭಾಗಿಯಾದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಕ್ಲೀನ್ ಚಿಟ್ ನೀಡಿದೆ. ಹೀಗಾದರೆ, ಶಿಕ್ಷೆ ಕೊಡುವುದಾದರೂ ಯಾರಿಗೆ ಎಂದು ಸಿಎಂ ಅವರನ್ನು ಪ್ರಶ್ನಿಸಿದರು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಭಾಗಿಯಾಗಿರುವ ಬಟ್ಟೆ ಬ್ಯಾಗ್ ಹಗರಣ ಏನಾಯಿತು? ಕರೊನಾ ಕಾಲದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಅಮಾಯಕರು ಮೃತರಾಗಲು ಯಾರು ಕಾರಣ? ಈ ಕುರಿತು ತನಿಖೆ ಮಾಡಿ ತಪ್ಪಿಸ್ಥರನ್ನು ಶಿಕ್ಷಿಸುವ ಬದಲು ರಕ್ಷಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಮೇಲೆ ಗುರುತರ ಆರೋಪಗಳಿವೆ. ಆದರೂ ಅವರ ಅಮಾನತು ಆದೇಶವನ್ನು ವಾಪಸ್ ಪಡೆದು ಕರ್ತವ್ಯಕ್ಕೆ ನಿಯೋಜಿಸಿರುವುದರ ಔಚಿತ್ಯವೇನು? ಇದೆಲ್ಲವನ್ನು ಗಮನಿಸಿದರೆ ಸಿಎಂ, ಸರ್ಕಾರದ ಮುಖ್ಯ ಕಾರ್ಯದರ್ಶಿ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ ಎಂದೂ ಆರೋಪಿಸಿದರು.