ಗಂಗೋತ್ರಿ ಬಡಾವಣೆಯ ನಿವಾಸಿಗಳು ಸೋಮವಾರ ನಗರ ಪಾಲಿಕೆ ಹೆಚ್ಚುವರಿ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸೀಮಾ, ಆಸಿಯಾ ಬೇಗಂ, ರಘುಪತಿ, ಸುಮಾ ಇದ್ದರು. 
ಮೈಸೂರು

ಗಂಗೋತ್ರಿ ಬಡಾವಣೆಗೆ ಕಲುಷಿತ ನೀರು ಪೂರೈಕೆ

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆ ಬಗೆಹರಿಸುವಂತೆ ನಗರ ಪಾಲಿಕೆ ಹೆಚ್ಚುವರಿ ಆಯುಕ್ತರಿಗೆ ನಿವಾಸಿಗಳಿಂದ ಮನವಿ
ಗಂಗೋತ್ರಿ ಬಡಾವಣೆಯಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೋರಿ ಗಂಗೋತ್ರಿ ಬಡಾವಣೆಯ ನಿವಾಸಿಗಳು ಸೋಮವಾರ ನಗರ ಪಾಲಿಕೆ ಹೆಚ್ಚುವರಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಗಂಗೋತ್ರಿ ಬಡಾವಣೆಯ ಕೆಲವು ಕ್ರಾಸ್‌ಗಳಲ್ಲಿ ಮೇ 31ರಿಂದ ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಿತವಾಗಿ ಸರಬರಾಜಾಗುತ್ತಿದೆ. ದುರ್ವಾಸನೆಯುಕ್ತ ನೀರು ಸರಬರಾಜಾಗಿ ಸಂಪುಗಳು ಹಾಗೂ ಟ್ಯಾಂಕುಗಳಿಗೆ ಸೇರಿದ ಕಾರಣ, ಇದನ್ನು ತಿಳಿಯದೆ ಬಳಸಿದ ಬಡಾವಣೆಯ ಹಲವಾರು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ. ಮಕ್ಕಳು, ವೃದ್ಧರು ಸೇರಿದಂತೆ ಹಲವರಿಗೆ ವಾಂತಿ, ಬೇಧಿ, ಜ್ವರದಂತಹ ಅನಾರೋಗ್ಯ ಕಾಣಿಸಿಕೊಂಡಿದೆ.
ಕಲುಷಿತ ನೀರಿನ ಸರಬರಾಜು ಬಗ್ಗೆ ದೂರು ನೀಡಿದ ನಂತರ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜೂನ್ 8ರಿಂದ ತಾತ್ಕಾಲಿಕವಾಗಿ ಪರಿಹಾರವಾದಂತೆ ಕಾಣುತ್ತಿದೆ. ನಾವೇ ಕೈಯಾರೆ ಖರ್ಚು ಮಾಡಿ ನಮ್ಮ ಸಂಪು, ಟ್ಯಾಂಕುಗಳನ್ನು ಸ್ವಚ್ಛಗೊಳಿಸಿದ್ದೇವೆ. ಇಡೀ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕುಡಿಯುವ ನೀರಿನ ಪೈಪುಗಳಿಗೆ ಕೊಳಚೆ ನೀರು ಎಲ್ಲಿ ಸೇರುತ್ತಿದೆ ಎಂಬುದನ್ನು ಪತ್ತೆಹಚ್ಚದ ಹೊರತು ಮತ್ತೆ ಯಾವಾಗ ಬೇಕಾದರೂ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಧ್ಯಪ್ರದೇಶದ ಇಂದೋರಿನಲ್ಲಿ ಘಟಿಸಿದಂತೆ ಸಾಂಕ್ರಾಮಿಕ ರೋಗ ಮತ್ತು ಸಾವುಗಳ ದುರಂತ ಸಂಭವಿಸುವ ಮೊದಲೇ ನಗರಪಾಲಿಕೆ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು. ಈ ಬಡಾವಣೆಯ ನೀರು ಸರಬರಾಜು ಹಾಗೂ ಒಳಚರಂಡಿ ಜಾಲದ ಕುರಿತು ಪರಿಣತಿ ಇರುವ ಇಂಜಿನಿಯರ್‌ಗಳ ಮೂಲಕ ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.
ಬಡಾವಣೆಯ ನಿವಾಸಿಗಳಾದ ಸೀಮಾ, ಆಸಿಯಾ ಬೇಗಂ, ರಘುಪತಿ, ಸುಮಾ , ಸುಭಾಷ್, ನಾಗರಾಜ್ ಇದ್ದರು.