- ಅನಿಲ ಪೂರೈಕೆಯಲ್ಲಿ ವ್ಯತ್ಯಯದಿಂದ ಅನೇಕ ಸಮಸ್ಯೆಗಳು ಸೃಷ್ಟಿ
- ಸಂಕಷ್ಟಕ್ಕೆ ಸಿಲುಕಿದ ಹೋಟೆಲ್ ಉದ್ಯಮ
ಮೈಸೂರು: ದೂರದ ಕೊಲ್ಲಿಯಲ್ಲಿ ನಡೆಯುತ್ತಿರುವ ಯುದ್ಧದ ಕಿಚ್ಚಿನ ಬಿಸಿ ಜಿಲ್ಲೆಯ ಅಡುಗೆ ಮನೆಗಳಿಗೂ ತಟ್ಟಿದ್ದು, ಗ್ಯಾಸ್ ಸಿಲಿಂಡರ್‌ಗಾಗಿ ಹಾಹಾಕಾರ ಸೃಷ್ಟಿಯಾಗಿ ಗ್ರಾಹಕರ ಪರದಾಡುತ್ತಿದ್ದಾರೆ.
ಇರಾನ್ ಮೇಲೆ ಅಮೆರಿಕ, ಇಸ್ರೇಲ್ ಸಮರ ಸಾರುವ ಮೂಲಕ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಘರ್ಷದ ಕಾರ್ಮೋಡ ಕವಿದಿದ್ದು, ಅಲ್ಲಿಂದ ಬರಬೇಕಾಗಿದ್ದ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲೂ ಅನಿಲ ಸಿಲಿಂಡರ್ ಅಭಾವಕ್ಕೆ ಕಾರಣವಾಗಿದೆ. ಸೌದೆ ಒಲೆಗೆ ಗ್ರಾಹಕರು ಶರಣರಾಗಿದ್ದಾರೆ.
ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲದ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ವಾಸ್ತವ ಬೇರೆಯೇ ಇದೆ.
ಎಷ್ಟು ಪ್ರಯತ್ನಿಸಿದರೂ ಸಿಲಿಂಡರ್ ಬುಕ್ಕಿಂಗ್ ಆಗುತ್ತಿಲ್ಲ. ಇದು ಗ್ರಾಹಕರನ್ನು ಕಂಗಾಲಾಗಿಸಿದೆ. ಹೋಟೆಲ್, ರೆಸ್ಟೋರೆಂಟ್, ಕೈಗಾರಿಕೆ, ಕಲ್ಯಾಣ ಮಂಟಪಗಳಿಗೆ ವಾಣಿಜ್ಯ ಸಿಲಿಂಡರ್ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಪೈಕಿ ಬಹಳಷ್ಟು ಹೋಟೆಲ್‌ಗಳು ಬಂದ್ ಆಗಿವೆ. ಅತಿಥಿ ಉದ್ಯಮ ಕಂಗೆಟ್ಟಿದೆ. ನಷ್ಟಕ್ಕೆ ಸಿಲುಕಿಕೊಂಡಿದೆ.
ಅನಿಲ ಪೂರೈಕೆಯಲ್ಲಿ ವ್ಯತ್ಯಯ ಅನೇಕ ಸಮಸ್ಯೆಗಳಿಗೆ ನಾಂದಿ ಹಾಡಿದೆ. ಸಾರ್ವಜನಿಕರು ಒಂದಿಲ್ಲವೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲಾಡಳಿತ ಸಾರ್ವಜನಿಕರಿಗೆ ತ್ವರಿತವಾಗಿ ಸಿಲಿಂಡರ್ ಪೂರೈಕೆಗೆ ವ್ಯವಸ್ಥೆ ಮಾಡಬೇಕು. ಜತೆಗೆ, ವಾಣಿಜ್ಯ ಬಳಕೆಗೂ ಅವಕಾಶ ಕಲ್ಪಿಸಿಕೊಡುವ ಮೂಲಕ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸುಲಲಿತವಾಗಿ ಮುಂದುವರಿದುಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಬೇಕಿದೆ. ಈ ಕುರಿತು ಸಂಗ್ರಹಿಸಿರುವ ಸಾರ್ವಜನಿಕರ ಅಭಿಪ್ರಾಯ ಇಲ್ಲಿದೆ.
ಅಕ್ರಮ ಸಂಗ್ರಹ, ಕಾಳಸಂತೆಯಲ್ಲಿ ಮಾರಿದರೆ ಕ್ರಮ
ಜಿಲ್ಲೆಯಲ್ಲಿ ಗೃಹಬಳಕೆಯ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಸಾರ್ವಜನಿಕರು ಗೃಹಬಳಕೆ ಅನಿಲದ ಕೊರತೆ ಉಂಟಾಗಬಹುದು ಎಂಬ ಭಯದಿಂದ ಮುಂಗಡವಾಗಿ ಬುಕ್ಕಿಂಗ್ ಮಾಡುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ. ಜತೆಗೆ, ಅಡುಗೆ ಅನಿಲವನ್ನು ಅಕ್ರಮ ಸಂಗ್ರಹ, ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುವುದು.
ಊಟ, ತಿಂಡಿ ತಯಾರಿಕೆಗೆ ಸಮಸ್ಯೆ
ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್ ಬುಕ್ ಆಗುತ್ತಿಲ್ಲ. ಸರ್ಕಾರಿ ಕಂಪನಿಗಳಾದ ಇಂಡೇನ್, ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಸಂಸ್ಥೆಯ ನಿರ್ದಿಷ್ಟ ಫೋನ್ ನಂಬರ್‌ಗಳು ಸ್ತಬ್ಧಗೊಂಡಿವೆ. ಎಷ್ಟು ಸಲ ಕರೆ ಮಾಡಿದರೂ ಸ್ವೀಕಾರವಾಗುತ್ತಿಲ್ಲ. ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆಯೂ ಬರುತ್ತಿಲ್ಲ. ಬುಕ್ಕಿಂಗ್ ಸಾಧ್ಯವಾಗುತ್ತಿಲ್ಲ. ಇದು ಊಟ, ತಿಂಡಿ ತಯಾರಿಕೆಗೆ ಸಮಸ್ಯೆಯಾಗಿದೆ. ಸಿಲಿಂಡರ್ ಯಾವಾಗ ಸಿಗುತ್ತದೆಯೋ ಎಂಬುದಕ್ಕೆ ಉತ್ತರವೂ ಸಿಗುತ್ತಿಲ್ಲ. ಹೀಗಾಗಿ, ವಿದ್ಯುತ್‌ನ ಇಂಡಕ್ಷನ್ ಸ್ಟೌನಲ್ಲಿ ಅನ್ನ-ಸಾಂಬರ್ ಮಾಡಿಕೊಂಡು ದಿನ ಕಳೆಯುವಂತಾಗಿದೆ.
ಸಂಕಷ್ಟಕ್ಕೆ ಸಿಲುಕಿದೆ ಹೋಟೆಲ್ ಉದ್ಯಮ
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಪ್ರವಾಸೋದ್ಯಮಕ್ಕೂ ಧಕ್ಕೆಯಾಗುತ್ತಿದೆ. ಪ್ರವಾಸಿಗರ ಸಂಖ್ಯೆ ಶೇ.50 ಕುಸಿದಿದೆ. ಕಾಯ್ದಿರಿಸಿದ ಕೊಠಡಿಗಳೂ ರದ್ದಾಗಿದೆ. ಹೋಟೆಲ್ ಉದ್ಯಮವನ್ನೇ ಅವಲಂಬಿಸಿರುವ 25 ಸಾವಿರ ಸಿಬ್ಬಂದಿಗೂ ತೊಂದರೆಯಾಗಿದ್ದು, ಹೋಟೆಲ್ ಉದ್ಯಮಿಗಳಿಗೆ ಶೇ.25ರಷ್ಟು ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಸಲು ಕ್ರಮ ಕೈಗೊಳ್ಳಬೇಕು.
ಅಧ್ಯಕ್ಷ, ಜಿಲ್ಲಾ ಹೋಟೆಲ್ ಮಾಲೀಕರ ಸಂಘ
ಕೈಗಾರಿಕೆ ಕ್ಷೇತ್ರದ ಮೇಲೂ ಪರಿಣಾಮ
ಎಲ್‌ಪಿಜಿ ಅಭಾವದ ಪರಿಣಾಮ ಕೈಗಾರಿಕೆ ಕ್ಷೇತ್ರದ ಮೇಲೆಯೂ ಆಗಿದೆ. ಈ ಸಮಸ್ಯೆ ಎದುರಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗಿದ್ದು, ಎಲೆಕ್ಟ್ರಿಕ್, ಬಾಯ್ಲರ್ ಬಳಕೆಗೆ ಮುಂದಾಗುವ ಮೂಲಕ ಕೆಲಸ-ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಗ್ಯಾಸ್ ಬೇಕಾಗಿರುವ ಕೆಲಸಗಳೆಲ್ಲ ನಿಂತಿದೆ. ಸದ್ಯಕ್ಕೆ ಕೈಗಾರಿಕೆಗಳಲ್ಲಿರುವ ಗ್ಯಾಸ್ ದಾಸ್ತಾನು ಮುಗಿದ ಮೇಲೆ ಸಮಸ್ಯೆ ಇನ್ನಷ್ಟು ಗಂಭೀರವಾಗಲಿದೆ.
ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ
ಖಾಸಗಿ ಕಂಪನಿಗಳಿಂದ ಸುಲಿಗೆ
ಸದ್ಯದ ಪರಿಸ್ಥಿತಿ ದುರ್ಲಾಭವನ್ನು ಖಾಸಗಿ ಗ್ಯಾಸ್ ಸಿಲಿಂಡರ್ ಕಂಪನಿಗಳು ಮಾಡಿಕೊಳ್ಳುತ್ತಿವೆ. ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಏಕಾಏಕಿ ಎರಡು ಪಟ್ಟು ಏರಿಕೆ ಮಾಡಿ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಸರ್ಕಾರಿ ಕಂಪನಿಗಳಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಸಿಗುತ್ತಿಲ್ಲ. ಹೀಗಾಗಿ, ಖಾಸಗಿ ಕಂಪನಿಗಳಿಂದ ಹಾಕಿಸಿಕೊಳ್ಳಬೇಕಾಗಿದೆ. 17 ಕೆಜಿ ಸಿಲಿಂಡರ್‌ಗೆ ಇದ್ದ 1480 ರೂ. ಬೆಲೆಯನ್ನು ಹಠಾತಾಗಿ 2700 ರೂ.ಗೆ ಹೆಚ್ಚಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಇಂಡೇನ್ ಕಂಪನಿಯ 19 ಕೆಜಿ ಸಿಲಿಂಡರ್‌ಗೆ 1940 ರೂ. ಬೆಲೆ ಇತ್ತು. ಆದರೀಗ ದೊಡ್ಡ ಮೊತ್ತವನ್ನೇ ಗ್ಯಾಸ್‌ಗಾಗಿಯೇ ಕೊಡುವಂತಾಗಿದೆ. ಇದರಿಂದ ನಷ್ಟವಾಗುತ್ತಿದೆ. ಹೀಗಾದರೆ ಹೋಟೆಲ್ ನಡೆಸುವುದು ಕಷ್ಟಕರವಾಗಿದೆ.
ಲಕ್ಷ್ಮೀ ಟಿಫಾನೀಸ್ ಹೋಟೆಲ್ ಮಾಲೀಕರು
ಆಟೋಗಳಿಗೂ ತೊಂದರೆ
ಸಿಎನ್‌ಜಿ ಬಳಕೆ ಮಾಡುವ ಆಟೋಗಳಿಗೂ ತೊಂದರೆಯಾಗಿದೆ. ನಗರದಲ್ಲಿ ಶೇ.45ರಷ್ಟು ಸಿಎನ್‌ಜಿ ಆಟೋಗಳಿವೆ. ಆರು ಕಡೆ ಸಿಎನ್‌ಜಿ ಬಂಕ್‌ಗಳಿವೆ. ಪರಿಸ್ಥಿತಿ ಲಾಭ ಪಡೆದುಕೊಂಡು ಏಕಾಏಕಿ 10-12 ರೂ.ದರ ಏರಿಕೆ ಮಾಡಲಾಗಿದೆ. ಹೇಳಿದಷ್ಟು ಸಿಎನ್‌ಜಿಯನ್ನೂ ಹಾಕುತ್ತಿಲ್ಲ. ಎರಡ್ಮೂರು ಲೀಟರ್ ಕಡಿಮೆ ಮಾಡಲಾಗುತ್ತಿದೆ. ಇದು ಆಟೋಚಾಲಕರ ಆದಾಯ ಕತ್ತರಿ ಹಾಕಿದೆ.
ಅಧ್ಯಕ್ಷ, ಮೈಸೂರು ಆಟೋಚಾಲಕರ ಸಂಘ
ವಾಣಿಜ್ಯ ಸಿಲಿಂಡರ್ ಪೂರೈಕೆ ಬಹುತೇಕ ಸ್ತಬ್ಧ
ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಬಹುತೇಕ ಸ್ತಬ್ಧವಾಗಿದೆ. ಇದರಿಂದ ಮೈಸೂರು ನಗರ, ಗ್ರಾಮಾಂತರ ಪ್ರದೇಶದ ಬಹಳಷ್ಟು ಹೋಟೆಲ್‌ಗಳು ಬಂದ್ ಆಗಿವೆ. ಇದೀಗ ಗ್ಯಾಸ್ ಸಿಲಿಂಡರ್ ದೊಡ್ಡ ಸಮಸ್ಯೆ ಕಾಡುತ್ತಿದೆ. ಹೋಟೆಲ್ ನಡೆಸುವುದು ಸವಾಲಿನ ಕೆಲಸವಾಗಿದೆ. ಇದು ಅತಿಥಿ ಉದ್ಯಮ ಕ್ಷೇತ್ರಕ್ಕೆ ದೊಡ್ಡ ನಷ್ಟ ಅಷ್ಟೇ ಅಲ್ಲ, ಗ್ರಾಹಕರೊಂದಿಗೆ ಬುನಾದಿ ಸಂಪರ್ಕವೇ ಕುಸಿದು ಹೋಗಲಿದೆ
ಮೈಸೂರು ಹೋಟೆಲ್ ಮಾಲೀಕರ ಸಂಘದ
ಬಿಸಿಯೂಟ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ
ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆ ಸರ್ಕಾರಿ ಶಾಲೆಯ ಬಿಸಿಯೂಟ ವ್ಯವಸ್ಥೆ ಮೇಲೆ ಇನ್ನೂ ತಟ್ಟಿಲ್ಲ. ಅಗತ್ಯ ಮುನ್ನೆಚ್ಚರಿಕೆ ವಹಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ. ಹೀಗಾಗಿ, ಮಕ್ಕಳಿಗೆ ಎಂದಿನಂತೆ ಮಧ್ಯಾಹ್ನ ಹೊತ್ತಿನಲ್ಲಿ ಬಿಸಿಯೂಟವನ್ನು ನಿರಾತಂಕವಾಗಿ ನೀಡಲು ಸಾಧ್ಯವಾಗಿದೆ.
ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘ