ಪರಿಶಿಷ್ಟ ಜಾತಿಯವರ ಮೂಲ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿ ದಸಂಸ ಪದಾಧಿಕಾರಿಗಳು ಸರಗೂರು ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. ಶಿವಶಂಕರ್, ಕಾಳಸ್ವಾಮಿ ವಲ್ಲಹಳ್ಳಿ, ಹಳೆಹೆಗ್ಗುಡಿಲು ಶಂಕರ್ ಇತರರು ಇದ್ದರು.  
ಮೈಸೂರು

ಸಿಸಿ ರಸ್ತೆ ನಿರ್ಮಾಣ, ಸಾಗುವಳಿ ಪತ್ರ ನೀಡಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್‌ಗೆ ದಸಂಸ ಪದಾಧಿಕಾರಿಗಳ ಮನವಿ
ಸರಗೂರು: ಮನುಗನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಳಿ ಸಿ.ಸಿ. ರಸ್ತೆ ನಿರ್ಮಿಸಬೇಕು, ರೈತರಿಗೆ ಸಾಗುವಳಿ ಪತ್ರ ನೀಡಬೇಕು, ಪರಿಶಿಷ್ಟ ಜಾತಿ ಜನಾಂಗದವರ ಸ್ಮಶಾನಕ್ಕೆ ಜಾಗ ಗುರುತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕಿನ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ದಸಂಸ ತಾಲೂಕು ಸಂಚಾಲಕ ಶಿವಶಂಕರ್ ಮಾತನಾಡಿ, ಹಲವು ವರ್ಷಗಳಿಂದ ಪರಿಶಿಷ್ಟ ಜಾತಿ ಜನಾಂಗದವರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಸೇರಿದಂತೆ ಹಲವು ಅಗತ್ಯ ಸಮಸ್ಯೆಗಳಿದ್ದು, ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದರು.
ಹಳೇಹೆಗ್ಗುಡಿಲು ಗ್ರಾಮದಿಂದ ಜಯನಗರ ಹಾಗೂ ಸ್ಮಶಾನದವರೆಗೆ ರಸ್ತೆ ಅಭಿವೃದ್ಧಿಪಡಿಸುವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಮರೆದಕಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಸ್ಮಶಾನಕ್ಕೆ ಜಾಗ ಹಾಗೂ ಆಟದ ಮೈದಾನಕ್ಕೆ ಸ್ಥಳ ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಮಠದಕಟ್ಟೆ ಗ್ರಾಮದಲ್ಲಿ ಸಿ.ಸಿ. ರಸ್ತೆ ಅಭಿವೃದ್ಧಿಪಡಿಸಬೇಕು. ಹೊಸಬಿದರಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಕೇಶವಿನ್ಯಾಸ ಅಂಗಡಿಯನ್ನು ತೆರವುಗೊಳಿಸಬೇಕು. ಹಳೇಯೂರು ಗ್ರಾಮದವರಿಗೆ ಸಾಗುವಳಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ದಸಂಸ ಖಜಾಂಚಿ ಕಾಳಸ್ವಾಮಿ ವಲ್ಲಹಳ್ಳಿ, ಹಳೆಹೆಗ್ಗುಡಿಲು ಶಂಕರ್, ದಡದಹಳ್ಳಿ ಪುಟ್ಟಯ್ಯ, ಲಿಂಗೇನಹಳ್ಳಿ ಪುಟ್ಟರಾಜು, ಹಾಜರಿದ್ದರು.