ಹುಣಸೂರು ನಗರಸಭೆ ವ್ಯಾಪ್ತಿಯ ಶಬ್ಬೀರ್‌ನಗರದ ಖಬರಸ್ತಾನ ಒಳಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ ಶಾಸಕ ಜಿ.ಡಿ.ಹರೀಶ್‌ಗೌಡ ಅವರನ್ನು ಸನ್ಮಾನಿಸಲಾಯಿತು. ಮಾಲಿಕ್ ಪಾಷ, ಮಜಾಜ್ ಅಹಮದ್, ಸಿರಾಜ್ ಪಾಷಾ ಇತರರಿದ್ದರು. 
ಮೈಸೂರು

10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ

ಹುಣಸೂರು: ಶಬ್ಬೀರ್ ನಗರದ ಖಬರಸ್ತಾನ ಒಳಭಾಗದಲ್ಲಿ 10 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ನಿರ್ಮಾಣಕ್ಕೆ ಇತ್ತೀಚೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ನಗರಸಭೆ ಅನುದಾನದಡಿ ನಗರಸಭೆಯ ಎಲ್ಲ 31 ಸದಸ್ಯರಿಗೂ ತಲಾ 10 ಲಕ್ಷ ರೂ.ಅನುದಾನ ಬಿಡುಗಡೆ ಮಾಡಲಾಗಿತ್ತು. ಈಗ ಶಬ್ಬೀರ್‌ನಗರದ ಖಬರಸ್ತಾನದೊಳಗಿನ ರಸ್ತೆ ಕಾಮಗಾರಿಗೆ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆಯೂ ನಗರಸಭೆ ಅಧ್ಯಕ್ಷ ಮಾಲಿಕ್ ಪಾಷ ಅವಧಿಯಲ್ಲೂ 25 ಲಕ್ಷ ರೂ.ಅನುದಾನ ನೀಡಲಾಗಿತ್ತು. ತಾಲೂಕಿನಲ್ಲಿ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗಾಗಿ ಅನುದಾನ ನೀಡುತ್ತಲೇ ಬಂದಿದ್ದೇನೆ ಎಂದರು.
ನಗರದ ಶಾಹಿ ಮಸೀದಿ ಅಭಿವೃದ್ಧಿಗೆ 6 ಲಕ್ಷ ರೂ., ಈದ್ಗಾ ಮಸೀದಿ ಅಭಿವೃದ್ಧಿಗೆ 10 ಲಕ್ಷ ರೂ., ಸರ್ಕಾರಿ ಉರ್ದು ಶಾಲೆಯ ಶೌಚಗೃಹ ನಿರ್ಮಾಣ ಮತ್ತು ಬಜಾರ್ ರಸ್ತೆಗೆ 70 ಲಕ್ಷ ರೂ.ಅನುದಾನ ನೀಡಲಾಗಿದೆ. ಗುರುಪುರ ಮತ್ತು ಬಿಳಿಕೆರೆ ಶಾದಿಮಹಲ್‌ಗೆ ತಲಾ 1 ಕೋಟಿ ರೂ.ಅನುದಾನ ದೊರಕಿಸಿಕೊಡಲಾಗಿದೆ ಎಂದು ಹೇಳಿದರು.
ನಗರದ ವಳ್ಳಿಯಮ್ಮನ ಕಟ್ಟೆಯಿಂದ ಮಂಜುನಾಥ ಬಡಾವಣೆ, ಮಾರುತಿ ಬಡಾವಣೆ ಒಳಗೊಂಡು ಶಬ್ಬೀರ್ ನಗರ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಾಡುತ್ತಿತ್ತು. ವರ್ಷದ ಹಿಂದೆ ನಗರಸಭೆ ಮಾಜಿ ಅಧ್ಯಕ್ಷರಾದ ಮಾಲಿಕ್ ಪಾಷ ಮತ್ತು ಗಣೇಶ್ ಕುಮಾರಸ್ವಾಮಿ ಅವಧಿಯಲ್ಲಿ ಹುಣಸೂರು ನಗರದಾದ್ಯಂತ ದುಸ್ಥಿತಿಯಲ್ಲಿರುವ ಒಳಚರಂಡಿ ವ್ಯವಸ್ಥೆಯ ಸಂಪೂರ್ಣ ಅಭಿವೃದ್ಧಿಗಾಗಿ ನಗರಸಭೆಯಲ್ಲಿ 72 ಕೋಟಿ ರೂ.ಮೊತ್ತದ ಯೋಜನಾ ಪ್ರಸ್ತಾವನೆ ತಯಾರಿಸಲಾಗಿತ್ತು. ಇದಕ್ಕೆ ರಾಜ್ಯ ಒಳಚರಂಡಿ ಅಭಿವೃದ್ಧಿ ಮಂಡಳಿಯಲ್ಲಿ ಅಂಕಿತ ದೊರಕಿಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಸಚಿವರೊಂದಿಗೆ ಚರ್ಚಿಸಿ ಸರ್ಕಾರದ ಅನುಮೋದನೆ ಕೊಡಿಸುವಲ್ಲಿ ಕ್ರಮವಹಿಸಲಿದ್ದೇನೆ. ಈ ಯೋಜನೆ ಜಾರಿಗೊಂಡಲ್ಲಿ ನಗರ ವ್ಯಾಪ್ತಿಯಲ್ಲಿ ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಾಲಿಕ್ ಪಾಷ, ಜಿ.ಪಂ.ಮಾಜಿ ಸದಸ್ಯ ಫಜಲುಲ್ಲಾ, ಮುಖಂಡರಾದ ಸಿರಾಜ್ ಪಾಷ, ಮಜಾಜ್ ಅಹಮದ್, ಟಿಎಪಿಸಿಎಂಎಸ್ ನಿರ್ದೇಶಕ ಗೋವಿಂದೇಗೌಡ ಹಾಜರಿದ್ದರು.