ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಥೀಮ್ ಪಾರ್ಕ್ ನಿರ್ಮಾಣ ಕುರಿತು ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್.ಯುಕೇಶ್‌ಕುಮಾರ್, ಶೇಖ್ ತನ್ವೀರ್ ಆಸಿಫ್, ಕೆ.ಆರ್.ರಕ್ಷಿತ್ ಇತರರು ಇದ್ದರು.
- ಹೋರಾಟ, ಸಾಧನೆ, ರಾಜತಾಂತ್ರಿಕತೆ ಮತ್ತು ಅವರ ತತ್ವ-ಸಿದ್ಧಾಂತಗಳನ್ನು ತಿಳಿಸಲು ಥೀಮ್ ಪಾರ್ಕ್ ನಿರ್ಮಾಣ
ಮೈಸೂರು: ಮೈಸೂರು ತಾಲೂಕು ಇಲವಾಲ ಬಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟ, ಸಾಧನೆ, ರಾಜತಾಂತ್ರಿಕತೆ ಮತ್ತು ಅವರ ತತ್ವ-ಸಿದ್ಧಾಂತಗಳನ್ನು ತಿಳಿಸಲು ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಥೀಮ್ ಪಾರ್ಕ್ ನಿರ್ಮಾಣ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಡನೆ ಸಭೆ ನಡೆಸಿ ಮಾತನಾಡಿ, ಥೀಮ್ ಪಾರ್ಕ್ ಅಥವಾ ಮ್ಯೂಸಿಯಂ ನಿರ್ಮಾಣ ಮಾಡಲು 10 ಎಕರೆ ಭೂಮಿ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಪಿಆರ್ ತಯಾರಿಸಿ ನೀಲಿನಕ್ಷೆಯೊಂದಿಗೆ ಮ್ಯೂಸಿಯಂ ನಿರ್ಮಾಣಕ್ಕೆ ಬೇಕಿರುವ ಅನುದಾನದೊಂದಿಗೆ ಯೋಜನೆ ಸಿದ್ಧವಾಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ದೇಶದ ಆರ್ಥಿಕತೆ, ನಿರುದ್ಯೋಗ, ನೀರಿನ ಸಮಸ್ಯೆ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರವಿದೆ. ಅವುಗಳನ್ನು ಥೀಮ್ ಪಾರ್ಕ್‌ನಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿ ತಿಳಿಸಬೇಕು ಎಂದರು.
ಬಾಬಾ ಸಾಹೇಬರ ಹುಟ್ಟಿನಿಂದ ಪರಿನಿರ್ವಾಣದವರೆಗೆ ಅವರ ಕಾಲಘಟ್ಟದ ಮುಖ್ಯ ಸಂಗತಿಗಳು ಸೇರಿದಂತೆ ಸಾಹು ಮಹಾರಾಜ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳು ಇಲ್ಲಿ ಅನಾವರಣಗೊಳ್ಳಬೇಕು. ಮೈಸೂರು ಐತಿಹಾಸಿಕ ಪ್ರವಾಸಿ ತಾಣವಾಗಿರುವುದರಿಂದ ಥೀಮ್ ಪಾರ್ಕ್ ಹೊಸತನದಿಂದ ಕೂಡಿರಲಿ, ಹೆಚ್ಚಿನ ಜನರನ್ನು ಆಕರ್ಷಿಸುವಂತಾಗಲಿ ಎಂದು ಸೂಚಿಸಿದರು.
ಮೈಸೂರಿನಲ್ಲಿ ನಿರ್ಮಾಣವಾಗುವ ಥೀಮ್ ಪಾರ್ಕ್‌ಗೆ ನೀಲಿನಕ್ಷೆ ಮಾಡುವ ಮೊದಲು ಪ್ರಮುಖರಿಂದ ಮಾಹಿತಿ ಕ್ರೋಡೀಕರಿಸಿ ಉತ್ತಮವಾಗಿ ಮ್ಯೂಸಿಯಂ ಮೂಡಿಬರುವಂತೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ಬಗ್ಗೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವುಗಳು ಸಹ ಮ್ಯೂಸಿಯಂನಲ್ಲಿ ಅನಾವರಣವಾಗಲಿ. ಸಾಮಾನ್ಯ ಜನರಿಗೂ ಪ್ರತಿಯೊಂದು ವಿಷಯ ಸುಲಭವಾಗಿ ತಲುಪುವ ರೀತಿ ಇರಲಿ ಎಂದು ಹೇಳಿದರು.
ಪ್ರತಿಯೊಬ್ಬ ನಾಗರಿಕರು ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೆನೆಯಬೇಕು. ಅವರು ನೀಡಿರುವ ಸಂವಿಧಾನದಿಂದ ನಾವು ಇಂದು ಉತ್ತಮ ಜೀವನ ನಡೆಸುತ್ತಿದ್ದೇವೆ, ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಿದ್ದೇವೆ ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಯುಕೇಶ್‌ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್, ಇನ್ನಿತರ ಇಲಾಖೆ ಅಧಿಕಾರಿಗಳು ಇದ್ದರು.