ನಿರ್ಮಾಣ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಫೆಡರೇಷನ್‌ನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎನ್.ಕೆ.ದೇವದಾಸ್, ಎಚ್.ಬಿ.ರಾಮಕೃಷ್ಣ, ಕೆ.ಜಿ.ಸೋಮರಾಜೇ ಅರಸ್, ಜೆ.ಶಿವಣ್ಣ ಇತರರು ಇದ್ದರು.
- ನಿರಂತರ ಉದ್ಯೋಗ, ಸ್ಥಿರ ಆದಾಯವಿಲ್ಲದೆ, ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ
- ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ಮಾರಕವಾಗಿದ್ದು ಅವುಗಳನ್ನು ಹಿಂಪಡೆಯಬೇಕು
ಮೈಸೂರು:ನಿರ್ಮಾಣ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಕ್ವಾರಿ ಕಾರ್ಮಿಕರ ಫೆಡರೇಷನ್‌ನಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ನಿರ್ಮಾಣ ಕಾರ್ಮಿಕರು ಎಲ್ಲ ಮೂಲಸೌಕರ್ಯಗಳನ್ನು ಬೇರೆಯರಿಗೆ ಮಾಡುವ ಕೆಲಸ ಮಾಡಿದರೂ ತಾವು ಮೂಲಸೌಲಭ್ಯದಿಂದ ವಂಚಿತರಾಗಿದ್ದಾರೆ. ನಿರಂತರ ಉದ್ಯೋಗ, ಸ್ಥಿರ ಆದಾಯವಿಲ್ಲದೆ, ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ದೀರ್ಘಕಾಲದ ಹೋರಾಟಗಳ ನಂತರ 1996ರಲ್ಲಿ ಕೇಂದ್ರ ಸರ್ಕಾರ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಎರಡು ಕಾನೂನುಗಳನ್ನು ಜಾರಿಗೆ ತಂದಿತು. ಆದರೆ ಕಾರ್ಮಿಕರು ಯೋಜನೆಯ ಪ್ರಯೋಜನ ಪಡೆಯುವ ಮೊದಲೇ, ಅವುಗಳನ್ನು ರದ್ದುಗೊಳಿಸಲಾಯಿತು. ಇದು ಕಾರ್ಮಿಕರಿಗೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದರು.
ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರಿಗೆ ಮಾರಕವಾಗಿದ್ದು ಅವುಗಳನ್ನು ಹಿಂಪಡೆಯಬೇಕು, ಭಾರತೀಯ ಕಾರ್ಮಿಕರ ರಕ್ಷಣೆಗಾಗಿ ಸಂಸತ್ತು 1923ರಿಂದ 1996ರ ನಡುವೆ ಜಾರಿಗೆ ತಂದ 29 ಕಾರ್ಮಿಕ ಕಾನೂನುಗಳನ್ನು ಪುನಃ ಸ್ಥಾಪಿಸಬೇಕು. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ 1996 ಅನ್ನು ಪುನಸ್ಥಾಪಿಸಿ ಪೂರ್ಣವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ದೇಶಾದ್ಯಂತ ಎಲ್ಲ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಸಾಮಾಜಿಕ ಭದ್ರತೆ ಪಡೆಯಲು ಇಎಸ್‌ಐ, ಪಿಎಫ್ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೋಂದಾಯಿಸಿಕೊಂಡು ಸೌಲಭ್ಯ ನೀಡಲು ಆದೇಶಿಸಬೇಕು. ನಿರ್ಮಾಣ ಕಾರ್ಮಿಕರಿಗೆ ಕನಿಷ್ಠ 36 ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸಬೇಕು. 60 ವರ್ಷ ತುಂಬಿದ ನಂತರ ತಿಂಗಳಿಗೆ 6 ಸಾವಿರ ರೂ. ಕನಿಷ್ಠ ಪಿಂಚಣಿ ನೀಡಬೇಕು. ಬಿಲ್ಡರ್‌ಗಳಿಂದ ಸಂಗ್ರಹಿಸಲಾಗುವ ಕಲ್ಯಾಣ ಸೆಸ್ ಅನ್ನು ಶೇ.2ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಕಲ್ಯಾಣ ಮಂಡಳಿಗೆ ನೀಡುವ ಮೊತ್ತಕ್ಕೆ ಸಮಾನ ಮೊತ್ತವನ್ನು ಕೊಡುಗೆಯಾಗಿ ನೀಡಬೇಕು. ನಿರ್ಮಾಣ ವಲಯದ ಮಹಿಳಾ ಕಾರ್ಮಿಕರಿಗೆ ಕಾನೂನಿನ ಪ್ರಕಾರ ಆರು ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು, ಮನೆ ನಿವೇಶನ ಹೊಂದಿರದ ನಿರ್ಮಾಣ ಕಾರ್ಮಿಕರಿಗೆ ಮನೆ ಕಟ್ಟಲು ಭೂಮಿ ಮತ್ತು ಮನೆ ಕಟ್ಟಿಸಲು ಆರ್ಥಿಕ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಎನ್.ಕೆ.ದೇವದಾಸ್, ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಬಿ.ರಾಮಕೃಷ್ಣ, ಕೆ.ಜಿ.ಸೋಮರಾಜೇ ಅರಸ್, ಜೆ.ಶಿವಣ್ಣ ಇತರರು ಇದ್ದರು.