ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ
ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಚಲಾವಣೆಯಾಗಿರುವ ಅಸಿಂಧು ಮತಕ್ಕೆ ನನ್ನ ಹೆಸರು ತಳಕು ಹಾಕುವ ಪ್ರಯತ್ನ ನಡೆಯುತ್ತಿದ್ದು, ಈ ಷಡ್ಯಂತ್ರವನ್ನು ನಮ್ಮ ಪಕ್ಷದವರೇ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಕಿಡಿಕಾರಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಅಸಿಂಧು ಮತ ಚಲಾಯಿಸಿದ್ದೇನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಯಾವ ಆಧಾರದಲ್ಲಿ ಅವರು ವರದಿ ಮಾಡಿದ್ದಾರೆ ಎಂದು ನಾನು ಪ್ರಶ್ನೆ ಮಾಡುತ್ತೇನೆ. ಈ ವಿಚಾರವಾಗಿ ಬಿಜೆಪಿಯ ರಾಜ್ಯ ನಾಯಕರು ಹಾಗೂ ಚುನಾವಣಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
ನಾನು ಅಸಿಂಧು ಮತ ಚಲಾಯಿಸಿದ್ದೇನೆ ಎಂದು ಸುದ್ದಿ ಹಬ್ಬಿಸಿರುವುದು ಸರಿಯಲ್ಲ. ಅಸಿಂಧು ಮತ ಚಲಾವಣೆ ಮಾಡುವಷ್ಟು ಅಪ್ರಬುದ್ಧನಲ್ಲ. ಆದರೆ, ಯಾವ ಕಾರಣಕ್ಕೆ ನನ್ನ ಹೆಸರು ಪ್ರಸ್ತಾಪವಾಯಿತು? ಯಾರು ಹುಟ್ಟು ಹಾಕಿದರು? ಈ ರೀತಿಯ ಸುಳ್ಳು ಸುದ್ದಿ ಮಾಡಿಸಿದ ವ್ಯಕ್ತಿ ಯಾರು ಎಂಬುದು ಸಹ ನನಗೆ ಗೊತ್ತಿದೆ. ಇಷ್ಟಕ್ಕೆ ನಾನು ಸುಮ್ಮನೆ ಬಿಡುವುದಿಲ್ಲ, ರಾಜಕೀಯವನ್ನು ರಾಜಕೀಯವಾಗಿ ಎದುರಿಸುತ್ತೇನೆ ಎಂದು ಎಚ್ಚರಿಸಿದರು.
ನಾನು ಅಸಿಂಧು ಮತ ಚಲಾಯಿಸಿದ್ದೇನೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆಯೇ? ಒಂದುವೇಳೆ ಘೋಷಣೆ ಮಾಡಿದರೆ ಅದರ ಹೊಣೆಯನ್ನು ಅವರೇ ಹೊರಬೇಕು. ಈ ವಿಚಾರದಲ್ಲಿ ನನ್ನ ವಿರುದ್ಧ ಏನೋ ಷಡ್ಯಂತ್ರ ನಡೆದಂತೆ ಇದೆ. ನಮ್ಮ ಪಕ್ಷದವರೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.