ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ)
- ಎಂಡಿಎಗೆ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆ
- ಮೈಸೂರು ಅಭಿವೃದ್ಧಿ ಪ್ರಾಧಿಕಾರ ಆಲೋಚನೆ
- *ವಿವಿಧೆಡೆ ಸುಮಾರು 150 ಎಕರೆ ಪ್ರದೇಶ ಖಾಲಿ
ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಬಳಕೆಯಾಗದೆ ಉಳಿದಿರುವ ಪ್ರಾಧಿಕಾರದ ಜಾಗಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ಆಲೋಚಿಸಿದೆ.
ಈಗಾಗಲೇ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದ ಸುಮಾರು 700 ಬಡಾವಣೆಗಳನ್ನು ಆಯಾಯ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ.
ಇದರಿಂದ ಅಲ್ಲಿಂದ ಬರುತ್ತಿದ್ದ ಆಸ್ತಿ ತೆರಿಗೆ, ನಕ್ಷೆ ಅನುಮೋದನೆ ಶುಲ್ಕ, ಖಾತಾ ನೋಂದಣಿ, ಖಾತಾ ವರ್ಗಾವಣೆ, ದಾಖಲೆಗಳ ದೃಢೀಕೃತ ಪ್ರತಿ ಶುಲ್ಕ, ಭೂಸ್ವಾಧೀನ ಸಂಬಧ ದೃಢೀಕರಣ ಪತ್ರ, ಎನ್‌ಒಸಿ, ಕಟ್ಟಡ ಪೂರ್ಣಗೊಂಡ ವರದಿ (ಸಿಆರ್) ಸೇರಿದಂತೆ ಇನ್ನಿತರ ಸೇವೆಗಳಿಂದ ಬರುತ್ತಿದ್ದ ಆದಾಯ ತಪ್ಪಿದೆ. ಈಗ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉಳಿದಿರುವ ಅಲ್ಪ ಪ್ರಮಾಣದ ಆಸ್ತಿಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಆದ್ದರಿಂದ ಅಧಿಕಾರಿಗಳು, ಸಿಬ್ಬಂದಿ, ಹೊರಗುತ್ತಿಗೆ ಸಿಬ್ಬಂದಿ ಸಂಬಳ, ನಿವೃತ್ತಿ ವೇತನ, ವಾಹನಗಳು ಮತ್ತು ಕಚೇರಿ ನಿರ್ವಹಣೆಯಂತಹ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಕಷ್ಟವಾಗುತ್ತಿದೆ.
ಈ ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮುಂದೆ ಪ್ರಾಧಿಕಾರವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಎಂಡಿಎ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತ ಕೆ.ಆರ್.ರಕ್ಷಿತ್ ಹಾಗೂ ಆಡಳಿತ ಮಂಡಳಿ ಸದಸ್ಯರು ಆರ್ಥಿಕ ಸಂಪನ್ಮೂಲ ಕ್ರೂಡೀಕರಿಸಲು ಚಿಂತನೆ ನಡೆಸಿದ್ದಾರೆ.
ಪ್ರಾಧಿಕಾರವನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಮೈಸೂರು ನಗರದ ವಿಜಯನಗರ 1, 2, 3, 4ನೇ ಹಂತ, ವಿಜಯಶ್ರೀಪುರ, ದಟ್ಟಗಳ್ಳಿ, ಶ್ರೀರಾಂಪುರ, ಜೆ.ಪಿ.ನಗರ, ದೇವನೂರು, ರಾಜೀವ್‌ನಗರ, ಲಲಿತಾದ್ರಿ ನಗರ, ಹೆಬ್ಬಾಳು ಹಾಗೂ ಪ್ರಾಧಿಕಾರದ ಇತರ ವಸತಿ ಬಡಾವಣೆಗಳಲ್ಲಿ ಬಳಸದೆ ಉಳಿದಿರುವ ಸುಮಾರು 150 ಎಕರೆ ಪ್ರದೇಶ ಇದೆ. ಇದನ್ನು ಅಧಿಕಾರಿಗಳು ಗುರುತಿಸಿ ಪಟ್ಟಿ ಮಾಡಿದ್ದಾರೆ.
ಈ 150 ಎಕರೆ ಪ್ರದೇಶದಲ್ಲಿ 20್ಡ 30, 30್ಡ 40, 40್ಡ 60, 50್ಡ 80 ಅಳತೆಯ ನಿವೇಶನ ರಚಿಸಿ, ಅವುಗಳನ್ನು ಸಾಮಾನ್ಯ ಮಾದರಿಯಲ್ಲಿ ಹಂಚಿಕೆ ಪ್ರಕ್ರಿಯೆ ನಡೆಸದೆ ಹರಾಜು ಮೂಲಕ ಹೆಚ್ಚಿನ ಬೆಲೆಗೆ ವಿಲೇವಾರಿ ಮಾಡುವ ಚಿಂತನೆ ಇದೆ. ಇದರಿಂದ ಆರ್ಥಿಕ ಸಂಪನ್ಮೂಲ ಸೃಜಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ನಿವೇಶನ ಹರಾಜು ಮಾಡುವುದರಿಂದ ಸುಮಾರು 1 ಸಾವಿರ ಕೋಟಿ ರೂ.ನಿರೀಕ್ಷಿಸಲಾಗಿದ್ದು, ಈ ಯೋಜನೆಯನ್ನು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ತರಲು ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್ ಅವರು ಅಧ್ಯಕ್ಷ ಜಿ.ಲಕ್ಷ್ಮೀಕಾಂತ ರೆಡ್ಡಿ ನಿರ್ದೇಶನದಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.