ಹುಣಸೂರು ತಾಲೂಕು ಗೌಡಿಕೆರೆಯಲ್ಲಿ ಗ್ರಾಮ ಘಟಕವನ್ನು ರೈತಸಂಘ ಹಾಗೂ ಹಸಿರು ಸೇನೆಯ ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಉದ್ಘಾಟಿಸಿದರು. ರೈತ ಮುಖಂಡರಿದ್ದಾರೆ.
ಹನಗೋಡು: ದೇಶಕ್ಕೆ ಅನ್ನ ನೀಡುವ ಕೃಷಿಕರು ಕೂಡ ಕಾರ್ಮಿಕರಂತೆ ಅಸಂಘಟಿತ ವಲಯಕ್ಕೆ ಸೇರಿದ್ದು, ಕಾರ್ಮಿಕ ವಲಯವೆಂದು ಪರಿಗಣಿಸಿ ಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ಕಟ್ಟಿಮನಿ ಸರ್ಕಾರವನ್ನು ಒತ್ತಾಯಿಸಿದರು.
ಹನಗೋಡು ಹೋಬಳಿಯ ಗೌಡಿಕೆರೆಯಲ್ಲಿ ಗುರುವಾರ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಮಿಕ ವಲಯಕ್ಕೆ ಕೃಷಿಕರನ್ನು ಸೇರಿಸಬೇಕೆಂದು ಈಗಾಗಲೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಲಾಗಿದೆ. ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಕೃಷಿ ಕ್ಷೇತ್ರದಿಂದ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪ್ರತಿವರ್ಷ ಮೂರು ಲಕ್ಷ ಕೋಟಿ ರೂ. ಆದಾಯ ಬರುತ್ತಿದೆ. ಆದರೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಕೇವಲ ಶೇ.13ರಷ್ಟು ಅನುದಾನ ನೀಡುತ್ತಿದೆ. ಕೃಷಿ ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಇದನ್ನು ಗಂಭೀರವಾಗಿ ಪರಿಗಣಿಸಿ ಬಜೆಟ್‌ನ ಅನುದಾನವನ್ನು ಶೇ.40ಕ್ಕೆ ಹೆಚ್ಚಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಅಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಆಂಧ್ರದಲ್ಲಿ ತಂಬಾಕಿಗೆ 460 ರೂ.ವರೆಗೆ ಬೆಲೆ ನೀಡಿದ್ದು, ಇಲ್ಲಿ ಕೇವಲ 320 ರೂ. ನೀಡಲಾಗುತ್ತಿದೆ. ನಮ್ಮ ಸಂಸದರು ಉತ್ತಮ ಬೆಲೆ ಹಾಗೂ ಕಾರ್ಡ್ ಕೊಡಿಸುವ ಸಂಬಂಧ ನೀಡಿದ್ದ ಭರವಸೆ ಈಡೇರಿಲ್ಲ. ಇನ್ನಾದರೂ ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ರಾಜ್ಯಯುವ ಘಟಕದ ಅಧ್ಯಕ್ಷ ಸ್ವಾಮಿಗೌಡ, ತಾಲೂಕು ಅಧ್ಯಕ್ಷ ಕಾಮಗೌಡನಹಳ್ಳಿ ತೀರ್ಥಕುಮಾರ್ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಜಯರಾಮೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಕಾವೇರಮ್ಮ, ರಾಜ್ಯ ಸಂಘದ ಗೌರವಾಧ್ಯಕ್ಷ ನಾಗರಾಜೇಗೌಡ, ಮುಖಂಡರಾದ ಪ್ರಕಾಶ್, ಕೃಷ್ಣಕುಮಾರ್, ವಿಜಯದೇವರಾಜ ಅರಸು, ನಾಗೇಂದ್ರ, ಗ್ರಾಮ ಘಟಕದ ಅಧ್ಯಕ್ಷ ಮಹದೇಗೌಡ, ಕಂಠಿ, ಸ್ವಾಮಿಗೌಡ, ಯ.ಮಲ್ಲೇಶ್, ಮುಖಂಡರಾದ ಮಹಾಶಂಕರ್, ಮಹೇಶ್, ಮಂಜೇಶ್‌ನಾಯಕ, ಕೃಷ್ಣನಾಯಕ,ದೇವನಾಯಕ, ಲೋಕೇಶ್, ಜಾವಿದ್, ಅಸ್ಲಂಪಾಷಾ ಇತರರಿದ್ದರು.