ಹುಣಸೂರು ತಾಲೂಕು ರತ್ನಪುರಿಯ ಲೈಯಾನ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಪಕ್ಷಿಸಂಕುಲಗಳ ಪರಿಚಯವನ್ನೊಳಗೊಂಡ ಪೋಸ್ಟರ್‌ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಅಭಿಷೇಕ, ದೀಪ್ತಿ, ಡಾ.ಶ್ರೀಕಾಂತ್ ಇತರರಿದ್ದರು.
- ನೇಚರ್ ಕನ್ಸರ್‌ವೇಷನ್ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಅಭಿಷೇಕ್ ಅಭಿಮತ
ಹುಣಸೂರು : ಪರಿಸರ ಸಮತೋಲನ ಕಾಯ್ದುಕೊಳ್ಳಲು ಪಕ್ಷಿಪ್ರಬೇಧಗಳನ್ನು ಸಂರಕ್ಷಿಸುವುದು ಅಗತ್ಯವೆಂದು ನೇಚರ್ ಕನ್ಸರ್‌ವೇಷನ್ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಅಭಿಷೇಕ್ ತಿಳಿಸಿದರು.
ತಾಲೂಕಿನ ರತ್ನಪುರಿಯ ಲೈಯಾನ್ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷಿ ಪ್ರಬೇಧಗಳ ಸಂರಕ್ಷಣೆ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ 1300ಕ್ಕೂ ಹೆಚ್ಚು ವಿವಿಧ ಪ್ರಬೇಧದ ಪಕ್ಷಿಗಳಿವೆ. ಪ್ರತಿಯೊಂದು ಪಕ್ಷಿಯ ಧ್ವನಿ, ಕೂಗುವ ವಿಧಾನ, ಜೀವನಶೈಲಿ ವಿಭಿನ್ನವಾಗಿದೆ. ಪಕ್ಷಿ ಸಂಕುಲಗಳು ಈ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪಕ್ಷಿ ಸಂಕುಲಗಳ ಆಹಾರಶೈಲಿ ದವಸಧಾನ್ಯಗಳನ್ನು ತಿನ್ನುವ ಪಕ್ಷಿಗಳಿಂದ ಆರಂಭಗೊಂಡು ಕೀಟ, ಹುಳು, ಮಾಂಸಗಳನ್ನು ತಿನ್ನುವ ಪಕ್ಷಿಗಳಿವೆ ಎಂದರು.
ಸಂಪನ್ಮೂಲ ವ್ಯಕ್ತಿ ದೀಪ್ತಿ ಮಾತನಾಡಿ, ವಿವಿಧ ಪಕ್ಷಿಗಳ ಆವಾಸಸ್ಥಾನ ಬೇರೆಯೇ ಇರುತ್ತದೆ. ಕಾಡು, ಕೆರೆ, ಸರೋವರ, ತೋಟ, ಕುರುಚಲು ಕಾಡು ಗದ್ದೆ ಬಯಲು, ಹುಲ್ಲುಗಾವಲು, ಹಾಗು ಜನ ವಸತಿಗಳಲ್ಲಿಯೂ ವಾಸಿಸುತ್ತವೆ. ಅವುಗಳ ಜೀವನ, ಪ್ರಣಯ, ಸಂತಾನೋತ್ಪತ್ತಿ ಇವೆಲ್ಲವು ಬಹು ಆಕರ್ಷಣೀಯ ಹಾಗೂ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಸಹಜವಾಗಿ ಬದುಕಬೇಕಾದಾಗ ಎದುರಿಸಬೇಕಾದ ಅಪಾಯಗಳು ವಿಚಿತ್ರ ಮತ್ತು ಗಂಭೀರವೂ ಹೌದು. ಪುಟ್ಟ ಪಕ್ಷಿ ಎಂದು ನಾವೆಲ್ಲರೂ ಕಡೆಗಣಿಸುವುದನ್ನು ಬಿಟ್ಟು ಅವುಗಳ ಆವಾಸಸ್ಥಾನಕ್ಕೆ ಧಕ್ಕೆಯಾಗದಂತೆ ಬದುಕಲು ಅವಕಾಶ ನೀಡಬೇಕಿದೆ ಎಂದರು.
ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕರಾದ ಚಿಲ್ಕುಂದ ಮಹೇಶ್, ಮಲ್ಲಿಕಾರ್ಜುನಸ್ವಾಮಿ, ಡಾ.ಎಸ್.ಶ್ರೀಕಾಂತ್, ಲೈಯಾನ್ ಸಂಸ್ಥೆಯ ಶರಣ್ಯ, ಶಾಲಿನಿ ಸೇರಿದಂತೆ ವಿವಿಧ ಶಾಲೆಗಳಿಂದ ಬಂದ ಶಿಕ್ಷಕರು, ಸಮಾಜ ಕಾರ್ಯಕತರು, ಪಕ್ಷಿ ವೀಕ್ಷಕರು ಪಾಲ್ಗೊಂಡಿದ್ದರು.
ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಪಕ್ಷಿಗಳ ವೀಕ್ಷಣೆ ಕುರಿತು ತಿಳಿವಳಿಕೆ ನೀಡುವ ಕ್ರಮಗಳನ್ನು ಆಟದ ಮೂಲಕ ಮತ್ತು ಕೆರೆಯೊಂದರಲ್ಲಿ ಪ್ರತ್ಯಕ್ಷ ದರ್ಶನದ ಮೂಲಕ ವಿವರಿಸಿದರು. ಪಕ್ಷಿಗಳನ್ನು ಪರಿಚಯಿಸುವ ಬಿತ್ತಿ ಪತ್ರ, ಪುಸ್ತಕ, ಕಾಡ್ಸ್, ಪೋಸ್ಟರ್ಸ್‌ಗಳನ್ನು ವಿತರಿಸಲಾಯಿತು.