ಕಾಂಗ್ರೆಸ್ ಕಾರ್ಯಕರ್ತರು ನಗರದ ಪುರಭವನದ ಆವರಣದಲ್ಲಿ ಅಹೋರಾತ್ರಿ ಸತ್ಯಾಗ್ರಹ
- ವಿಬಿ ಜಿ ರಾಮ್‌ಜಿ ವಿರುದ್ಧ ಕಾಂಗ್ರೆಸ್ ಹೋರಾಟ
- ಗಾಂಧಿ ಪ್ರತಿಮೆ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಹೋರಾತ್ರಿ ಹೋರಾಟಕ್ಕೆ ಚಾಲನೆ
ಮೈಸೂರು: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಉದ್ಯೋಗ ಖಾತರಿ ಯೋಜನೆಯನ್ನು ಮರುಸ್ಥಾಪನೆಗೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಪುರಭವನದ ಆವರಣದಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸಿದರು.
ವಿಬಿ ಜಿ ರಾಮ್‌ಜಿ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸುತ್ತಿದ್ದು, ಇದರ ಭಾಗವಾಗಿ ಭಾನುವಾರ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಪ್ರತಿಭಟನೆ ನಡೆಸುವ ಮೂಲಕ ಮನರೇಗಾ ಯೋಜನೆ ಮರು ಜಾರಿಗೆ ಆಗ್ರಹಿಸಲಾಯಿತು.
ಗಾಂಧಿವೃತ್ತದಲ್ಲಿರುವ ಗಾಂಧಿ ಪ್ರತಿಮೆ, ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಹೋರಾತ್ರಿ ಹೋರಾಟಕ್ಕೆ ಚಾಲನೆ ಕೊಡಲಾಯಿತು. ವಂದೇ ಮಾತರಂ ಗೀತೆ ರಿಂಗಣಿಸಿತು. ಸಂವಿಧಾನ ಪೀಠಿಕೆ ಪಠಣ ಸಹ ನಡೆಯಿತು. ಪಕ್ಷದ ಮುಖಂಡರು ಭಾಷಣ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾತ್ರಿ 10ಗಂಟೆ ಬಳಿಕ ಕ್ರಾಂತಿಗೀತೆ ಪುರಭವನದ ಆವರಣದಲ್ಲಿ ಮಾರ್ಧನಿಸಿದವು. ಮಧ್ಯರಾತ್ರಿ ಹೊತ್ತಿನಲ್ಲಿ ದೇಶಭಕ್ತಿಗೀತೆಗಳು ಪ್ರಸ್ತುತ ಪಡಿಸಲಾಯಿತು. ಬಳಿಕ ಮನರೇಗಾ ಸಾಕ್ಷೃಚಿತ್ರ, ಮಹಾತ್ಮಗಾಂಧಿ ಜೀವನಾಧಾರಿತ ಚಲನಚಿತ್ರ, ಡಾ.ಅಂಬೇಡ್ಕರ್ ಅವರ ಸಾಕ್ಷೃಚಿತ್ರ ಪ್ರದರ್ಶನ ಮಾಡಲಾಯಿತು. ಬೆಳಗ್ಗೆ 7ಕ್ಕೆ ರಾಷ್ಟ್ರಗೀತೆಯೊಂದಿಗೆ ಪ್ರತಿಭಟನೆ ಅಂತ್ಯಗೊಳಿಸಲಾಯಿತು.
ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು, ವಿಬಿ ಜಿ ರಾಮ್ ಜಿ ಕಾಯ್ದೆ ಕರಾಳ ಕಾನೂನು. ಇದು ರೈತರು, ದಲಿತರು, ಅಲ್ಪಸಂಖ್ಯಾತರಿಗೆ ಅಪಮಾನ ಮಾಡುತ್ತದೆ. ನಿರುದ್ಯೋಗಿಗಳ ಉದ್ಯೋಗದ ಹಕ್ಕನ್ನು ಕಸಿಯುತ್ತದೆ. ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಇದನ್ನು ರೂಪಿಸಿದೆ ಎಂದು ಕಿಡಿಕಾರಿದರು.
ಮನರೇಗಾ ಹೆಸರು ಬದಲಿಸಿರುವ ಕೇಂದ್ರದ ಎನ್‌ಡಿಎ ಸರ್ಕಾರ ಸ್ವಾತಂತ್ರೃ ಹೋರಾಟದ ರೂವಾರಿ ಗಾಂಧೀಜಿಗೆ ಅವಮಾನ ಮಾಡಿದೆ. ನೆಹರೂ ಮತ್ತು ಗಾಂಧೀಜಿ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಹೆಸರು ಬದಲಾವಣೆ ಮಾಡುತ್ತಿದೆ. ಭ್ರಷ್ಟಾಚಾರ ತಡೆಗಾಗಿ ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಸಮರ್ಥಿಸುವ ಬಿಜೆಪಿ ನಾಯಕರು, 10 ವರ್ಷಗಳಿಂದ ಏಕೆ ಸುಮ್ಮನಿದ್ದರು? ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ದೇಶದ ಅಭಿವೃದ್ಧಿಯಲ್ಲಿ ಮೋದಿ ಕೊಡುಗೆ ಶೂನ್ಯ. ಅಂಬೇಡ್ಕರ್, ಗಾಂಧಿ ಅವರ ಹೆಸರನ್ನು ಬದಲಾಯಿಸುವ ಕೆಲಸ ಮಾಡುತ್ತಿದ್ದಾರೆಯೇ ವಿನಃ ಅವರ ಆಶಯಗಳಿಗೆ ಎಳ್ಳುನೀರು ಬಿಡಲಾಗುತ್ತಿದೆ. ಅಭಿವೃದ್ಧಿಯನ್ನು ಕುಂಠಿತಗೊಳಿಸಲಾಗಿದೆ ಎಂದು ದೂರಿದರು.
ಕೊಳ್ಳೇಗಾಲದ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಹಿಂದೆ ದೇಶದ ಸ್ವಾತಂತ್ರೃಕ್ಕಾಗಿ ಚಳವಳಿ ನಡೆದರೆ, ಇಂದು ಸಂವಿಧಾನ ಉಳಿಸಲು, ಸಮಸಮಾನತೆ ತರಲು ಚಳವಳಿ ಮಾಡಬೇಕಿದೆ. ಹೋರಾಟ ಮಾಡದಿದ್ದರೆ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಿ ಮನುವಾದ ಹೇರುವ ಕೆಲಸ ಆಗಲಿದೆ ಎಂದು ಎಚ್ಚರಿಸಿದರು.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಹಿಂದುಳಿದ ವರ್ಗದವರ, ದಲಿತರ, ಶೋಷಿತರ ಪರವಾದ ನಿಲುವು ಕಾಣುತ್ತಿಲ್ಲ. ಹೆಣ್ಣು ಮಕ್ಕಳಿಗೆ ಹೆಸರಿಗಷ್ಟೇ ಗೌರವ ನೀಡಲಾಗುತ್ತಿದೆ. ಬಾಬಾ ಸಾಹೇಬರ ಸಂವಿಧಾನವನ್ನು ಮುಗಿಸುವ ಕುತಂತ್ರ ಮಾಡಲಾಗುತ್ತಿದೆ. ದೇಶಾದ್ಯಂತ ಬುಲ್ಡೋಜರ್ ಸಂಸ್ಕೃತಿ ತರುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಕೊಳ್ಳೇಗಾಲದ ಜಿ.ಎನ್.ನಂಜುಂಡಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಅರುಣ್‌ಕುಮಾರ್, ಎಂ.ಶಿವಣ್ಣ, ನಾಗೇಶ್, ರಮೇಶ್, ರವಿಪ್ರಕಾಶ್, ಶಿವಪ್ರಸಾದ್, ಈಶ್ವರ್ ಚಕ್ಕಡಿ, ಕೆ.ಮಹೇಶ್, ಗಿರೀಶ್ ಇನ್ನಿತರರಿದ್ದರು.
ಜಾಗತಿಕ ಮಟ್ಟದಲ್ಲಿ ಅವಮಾನ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮಹಾತ್ಮ ಗಾಂಧೀಜಿ ಹೆಸರನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಅವಮಾನ ಮಾಡಿದೆ ಎಂದು ಹರಿಹಾಯ್ದರು.
ನರೇಗಾ ಯೋಜನೆ ಮಹಾತ್ಮ ಗಾಂಧೀಜಿಯ ಅಂತ್ಯೋದಯ ಮತ್ತು ಸ್ವರಾಜ್ ಆಶಯವನ್ನು ಒಳಗೊಂಡಿತ್ತು. ನರೇಗಾ ತಿದ್ದುಪಡಿ ದುಡಿಯುವ ಹಕ್ಕು, ರಾಜಕೀಯ, ಆರ್ಥಿಕ ಮತ್ತು ಸಂವಿಧಾನ ಹಕ್ಕನ್ನು ಉಲ್ಲಂಘನೆ ಮಾಡುತ್ತದೆ. ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸದೆ ತರಾತುರಿಯಲ್ಲಿ ಕಾಯ್ದೆ ತಂದಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಈ ಕಾಯ್ದೆ ದುಡಿಯುವ ಹಕ್ಕಿಗೆ ಮಾರಕವಾಗಿದೆ ಎಂದರು.
ಹೊಸ ಕಾಯ್ದೆಯಿಂದ ಗ್ರಾಮ ಸಭೆ, ಪಂಚಾಯಿತಿ ಅಧಿಕಾರ ಮೊಟಕು ಮಾಡಲಾಗಿದೆ. ದನದ ಕೊಟ್ಟಿಗೆ, ಹೊಲದ ರಸ್ತೆ ನಿರ್ಮಾಣ ಸೇರಿದಂತೆ ಯಾವುದಕ್ಕೂ ಅವಕಾಶ ಇಲ್ಲವಾಗಿದೆ. ದೇಶದ ಜನಪರವಾದ ಯೋಜನೆಯನ್ನು ನಾಶ ಮಾಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ನರೇಗಾ ಯೋಜನೆ ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕು, ಪಂಚಾಯಿತಿಗಳ ಸ್ವಯಂ ಆಡಳಿತದ ಹಕ್ಕನ್ನು ಮರು ಸ್ಥಾಪಿಸಬೇಕು. 400 ರೂ. ಕನಿಷ್ಠ ವೇತನ ನೀಡಬೇಕು ಎಂದು ಆಗ್ರಹಿಸಿದರು.