ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಮೋಹನ್ ವಿಶ್ವ ಮಾತನಾಡಿದರು 
ಮೈಸೂರು

ಉದ್ಯೋಗ ನೇಮಕಾತಿ ಅಕ್ರಮ ಕುರಿತು ಕಾಂಗ್ರೆಸ್ ಮೌನ : ಬಿಜೆಪಿ ವಕ್ತಾರ ಮೋಹನ್ ವಿಶ್ವ ಟೀಕೆ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ರಾಜ್ಯ ನಾಯಕರು ದೆಹಲಿಗೆ ಹೋಗಿ ಹೋರಾಟ ನಡೆಸುತ್ತಾರೆ. ಆದರೆ ಇಲ್ಲೇ ನಡೆದಿರುವ ಅಕ್ರಮದ ಬಗ್ಗೆ ಮಾತನಾಡುತ್ತಿಲ್ಲ
  • ಕಾಂಗ್ರೆಸ್ ಸರ್ಕಾರದಲ್ಲಿ ಸಾಲು, ಸಾಲು ಅಕ್ರಮಗಳು ನಡೆದಿದ್ದರೂ ಯಾರು ತಲೆ ಕೆಡಿಸಿಕೊಳ್ಳಲಿಲ್ಲ

ಮೈಸೂರು:

ರಾಜ್ಯದಲ್ಲಿ ನಡೆಯುತ್ತಿರುವ ಉದ್ಯೋಗ ನೇಮಕಾತಿ ಪರೀಕ್ಷೆ ಅಕ್ರಮದ ಕುರಿತು ಕಾಂಗ್ರೆಸ್ ನಾಯಕರು ತುಟಿ ಬಿಚ್ಚುತ್ತಿಲ್ಲ ಎಂದು ಬಿಜೆಪಿ ವಕ್ತಾರ ಮೋಹನ್ ವಿಶ್ವ ಟೀಕಿಸಿದರು.

ನೀಟ್ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿದೆ ಎಂದು ಕಾಂಗ್ರೆಸ್ ರಾಜ್ಯ ನಾಯಕರು ದೆಹಲಿಗೆ ಹೋಗಿ ಹೋರಾಟ ನಡೆಸಿದ್ದರು. ಆದರೆ, ರಾಜ್ಯದಲ್ಲೇ ನಡೆದಿರುವ ಕೆಪಿಎಸ್‌ಸಿ ನೇಮಕಾತಿ, ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಾಲು, ಸಾಲು ಅಕ್ರಮಗಳು ನಡೆದಿದ್ದರೂ ಯಾರು ತಲೆ ಕೆಡಿಸಿಕೊಳ್ಳಲಿಲ್ಲ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಎನ್ನುವ ಹೇಳುವ ಜಾಯಮಾನ ಕಾಂಗ್ರೆಸ್‌ನದ್ದು ಎಂದು ಮೂದಲಿಸಿದರು. ಉದ್ಯೋಗ ನೀಡದ ಕಾಂಗ್ರೆಸ್ ವಿರುದ್ಧ ನಿರುದ್ಯೋಗಿಗಳು ಪ್ರತಿಭಟನೆಗೆ ಮುಂದಾದಾಗ, 52 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ ನೇಮಕದಲ್ಲಿ ಹಾಗೂ ಪರೀಕ್ಷೆಗಳಲ್ಲಿ ವ್ಯಾಪಕ ಅಕ್ರಮ ನಡೆಯುತ್ತಿದೆ ಎಂದು ಮೋಹನ್ ವಿಶ್ವ ಟೀಕಿಸಿದರು.
ಸೂಕ್ತ ತನಿಖೆ ನಡೆಸಲಿ:
ಕೆಪಿಎಸ್‌ಸಿ ನಡೆಸಿದ ಪಶುವೈದ್ಯರ ನೇಮಕದಲ್ಲಿ ಒಬ್ಬೊಬ್ಬರಿಂದ ಸುಮಾರು 80 ಲಕ್ಷ ರೂ. ಹಗರಣ ನಡೆದಿದೆ
ಎಂಬ ದೂರುಗಳಿವೆ. ಆದ್ದರಿಂದ ಸೂಕ್ತ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಖರ್ಗೆ ವಿಫಲ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯುವಜನರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಪ್ರಕರಣ ಹೆಚ್ಚಾಗಿದೆ. ಇವುಗಳನ್ನು ನಿಯಂತ್ರಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಫಲರಾಗಿದ್ದರೆ. ಮಾತೆತ್ತಿದರೆ ಆರ್‌ಎಸ್‌ಎಸ್, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರನ್ನು ಟೀಕಿಸುವ ಅವರು, ತಮ್ಮ ಇಲಾಖೆಯಲ್ಲಿ ಪೇದೆಗಳ ನೇಮಕ ಪರೀಕ್ಷೆಯನ್ನು ಸರಿಯಾಗಿ ನಡೆಸಲು ವಿಫಲರಾಗಿದ್ದಾರೆ ಎಂದು ದೂರಿದರು.
ಎಲ್ಲರ ಕಣ್ಮುಂದೆಯೇ ಅಕ್ರಮಗಳು ನಡೆಯುತ್ತಿದ್ದರೂ ಸಚಿವರು ಈಗ ಕಣ್ಮುಚ್ಚಿ ಕುಳಿತಿದ್ದಾರೆ. ಆದ್ದರಿಂದ ಪ್ರಿಯಾಂಕ್ ಖರ್ಗೆಗೆ ಸಚಿವರಾಗಿ ಮುಂದುವರಿಯಲು ನೈತಿಕತೆ ಇಲ್ಲ. ತಕ್ಷಣವೇ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಸೇರಿದಂತೆ ಹಲವು ಹಗರಣಗಳ ವಿರುದ್ಧ ಬಿಜೆಪಿ ಹೋರಾಟ ನಡೆಸಿದೆ. ಅದರಲ್ಲಿ ಯಶಸ್ವಿಯಾಗಿದೆ. ಈಗ ಉದ್ಯೋಗ ನೇಮಕ, ಪರೀಕ್ಷೆ ಹಗರಣ ಕುರಿತು ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಹೋರಾಟಕ್ಕೆ ಮುಂದಾಗುತ್ತದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಬಿ. ನಾಗೇಶ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರೀಕ್ಷಿತ ರಾಜ್ ಅರಸ್, ಜಿಲ್ಲಾ ಕಾರ್ಯದರ್ಶಿ ದಯಾನಂದ ಪಟೇಲ್, ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ ಇತರರು ಇದ್ದರು.