ಕೆ.ಆರ್.ನಗರದಲ್ಲಿ ಶಾಸಕ ಡಿ.ರವಿಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಬಿ.ಜೆ.ವಿಜಯಕುಮಾರ್, ಸಿದ್ದಪ್ಪ, ಸಿ.ಪಿ.ರಮೇಶ್ ಇದ್ದರು. 
ಮೈಸೂರು

ಶಾಸಕ ರವಿಂಶಕರ್ ನೇತೃತ್ವದಲ್ಲಿ ಪ್ರತಿಭಟನೆ

ಲಲಾಟಾಕ್ಷ ಎಸ್
ಕೆ.ಆರ್.ನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಹೆಸರನ್ನು ರದ್ದುಗೊಳಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಶಾಸಕ ಡಿ.ರವಿಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಜನಪ್ರಿಯ ಮನರೇಗಾ ಯೋಜನೆ ಹೆಸರನ್ನು ರದ್ದುಗೊಳಿಸಿ ಅದನ್ನು ವಿಬಿ ಜಿ ರಾಮ್ ಜಿ ನಾಮಕರಣ ಮಾಡಲು ಇಂದಿನ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಬಡಜನರ ಬವಣೆ ಅರಿತ ಡಾ.ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ದೇಶದ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ಜಾರಿಗೊಳಿಸಿ ರೈತರು, ಕಾರ್ಮಿಕರು, ಮಹಿಳೆಯರು, ಬಡವರು ಸೇರಿದಂತೆ ಕೋಟ್ಯಂತರ ಜನರಿಗೆ ಕೆಲಸ ನೀಡುವ ಜತೆಗೆ ಕೆಲಸಕ್ಕೆ ತಕ್ಕ ಕೂಲಿ ನೀಡಿ ಆರ್ಥಿಕವಾಗಿ ಬೆಂಬಲಕ್ಕೆ ನಿಂತಿತ್ತು ಎಂದರು.
ನರೇಗಾ ಯೋಜನೆಯಿಂದ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ಶಾಶ್ವತ ಕಾಮಗಾರಿಗಳು, ಶಾಶ್ವತ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು. ಆದರೆ ಈಗ ಕೇಂದ್ರದ ಸರ್ಕಾರ ಇಂತಹ ಮಹತ್ವಾಕಾಂಕ್ಷಿ ಯೋಜನೆಯ ಹೆಸರು ಬದಲಾಯಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಕಸಿಯುತ್ತಿದೆ ಎಂದು ಆರೋಪಿಸಿದರು.
ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ ಅವರ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಮೈಸೂರು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮಾಜಿ ಸದಸ್ಯ ಸಿದ್ದಪ್ಪ, ಮುಖಂಡ ಅಪ್ಪಾಜಿಗೌಡ, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿ ಮಂಜು, ಕಾಂಗ್ರೆಸ್ ಮುಖಂಡರಾದ ಕುಮಾರ್, ಸಿ.ಪಿ.ಶಂಕರ್, ಮಹದೇವ್, ಎಚ್.ಎಂ.ಮಂಜು, ರಾಜೇಶ್, ಮಂಜುನಾಥ್ ಹಾಜರಿದ್ದರು.