ನರೇಗಾ ಮರು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪಾದಯಾತ್ರೆ ನಡೆಸಿದರು. ಎಂ.ಲಕ್ಷ್ಮಣ್, ಡಾ.ಬಿ.ಜಿ.ವಿಜಯಕುಮಾರ್, ಶಿವಪ್ರಸಾದ್ ಇತರರು ಇದ್ದರು.
- ಜನಪರ ಕಾಯ್ದೆಯೊಂದನ್ನು ದುರ್ಬಲಗೊಳಿಸುವ ಪ್ರಯತ್ನ ಖಂಡನೀಯ
- ಉದ್ಯೋಗ ಭದ್ರತೆ ಕಾನೂನು ಅನ್ವಯ ನಿರಂತರ ಉದ್ಯೋಗ ಹಾಗೂ ವೇತನ ದೊರೆಯಲು ನರೇಗಾ ಯೋಜನೆ ಜಾರಿಗೊಳಿಸಿ
ಮೈಸೂರು; ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ತಾಲೂಕು ಕಚೇರಿವರೆಗೆ ಗುರುವಾರ ಪಾದಯಾತ್ರೆ ನಡೆಸಿದರು.
ಬಿಜೆಪಿಯು ನರೇಗಾ ಅಥವಾ ಗಾಂಧಿ ಹೆಸರನ್ನಷ್ಟೇ ಬದಲಾಯಿಸದೆ, ಕಾಯ್ದೆಯ ಆಶಯವನ್ನೇ ಪರಿವರ್ತನೆ ಮಾಡಿದೆ. ವಿಬಿ ಜಿ ರಾಮ್ ಜಿ ಎಂಬ ಅಪರಿಚಿತ ಹೆಸರು ಇಟ್ಟು, ಸ್ವರೂಪ ಬದಲಾಯಿಸಲಾಗಿದೆ. ಇದರಿಂದ ಬಡ ಜನರಿಗಾಗುತ್ತಿರುವ ಅನ್ಯಾಯ ಪ್ರಶ್ನಿಸುವುದು ಕಾಂಗ್ರೆಸ್ ಬದ್ಧತೆ. ಆದರೆ ಬಿಜೆಪಿ ಮತಗಳಿಕೆಗಷ್ಟೇ ಹೋರಾಟ ಕೈಗೆತ್ತಿಕೊಳ್ಳುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ನರೇಗಾ ಯೋಜನೆ ಜಾರಿಯಾಗಿ 2 ದಶಕವಾಗಿದ್ದು, ರಾಜ್ಯದಲ್ಲಿ 180 ಕೋಟಿ ಕೂಲಿ ದಿನ ನಿರ್ಮಾಣ ಮಾಡಿತ್ತು. 80 ಸಾವಿರ ಕೋಟಿ ರೂ. ವಿನಿಯೋಗವಾಗಿದೆ. ಇದರೊಂದಿಗೆ ಕೆರೆ ಕಟ್ಟೆಗೆ ಬದು ನಿರ್ಮಾಣ, ಚೆಕ್ ಡ್ಯಾಂ, ಕಾಲುವೆ ನಿರ್ಮಾಣ ಸೇರಿದಂತೆ ಹಳ್ಳಿಗಳಲ್ಲಿ ಕೆಲಸಗಳು ಆಗಿವೆ. ಇದೀಗ ಜನಪರ ಕಾಯ್ದೆಯೊಂದನ್ನು ದುರ್ಬಲಗೊಳಿಸುವ ಪ್ರಯತ್ನ ಖಂಡನೀಯ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರವು ಅಮೆರಿಕದೊಂದಿಗೆ 40 ಲಕ್ಷ ಕೋಟಿ ರೂ. ವ್ಯವಹಾರದ ಒಪ್ಪಂದ ಮಾಡಿದ್ದು, ಅಲ್ಲಿನ ಉತ್ಪನ್ನಗಳಿಗೆ ಭಾರತದಲ್ಲಿ ಮಾರುಕಟ್ಟೆ ನೀಡುವ ಯೋಜನೆ ರೂಪಿಸಲಾಗಿದೆ. ದವಸ ಧಾನ್ಯ ಅಮೆರಿಕದಿಂದ ಬಂದರೆ ನಮ್ಮ ರೈತರಿಗೆ ನಷ್ಟವಾಗಲಿದೆ. ಜನರು ಹಳೇ ಪದ್ಧತಿಗೆ ಹೋಗಿ, ಬಡವರು, ದೀನ ದಲಿತರು ತಮ್ಮ ಮುಂದೆ ಕೈಕಟ್ಟಿ ನಿಲ್ಲುವಂತೆ ಮಾಡುವ ವ್ಯವಸ್ಥೆಯನ್ನು ಬಿಜೆಪಿ ರೂಪಿಸುತ್ತಿದೆ ಎಂದು ದೂರಿದರು.
ಉದ್ಯೋಗ ಭದ್ರತೆ ಕಾನೂನು ಅನ್ವಯ ನಿರಂತರ ಉದ್ಯೋಗ ಹಾಗೂ ವೇತನ ದೊರೆಯಲು ನರೇಗಾ ಯೋಜನೆ ಜಾರಿಗೊಳಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಶಿವಪ್ರಸಾದ್, ಸತೀಶ್‌ಕುಮಾರ್, ಗುರುಸ್ವಾಮಿ ಇಲವಾಳ, ಲೋಕೇಶ್ ಮಾದಾಪುರ, ಉತ್ತನಹಳ್ಳಿ ಶಿವಣ್ಣ, ಮೋಹನ್, ಸತೀಶ್‌ಕುಮಾರ್ ಇತರರು ಇದ್ದರು.