ತಿ.ನರಸೀಪುರ ಪಟ್ಟಣದ ಲೋಕೋಪಯೋಗಿ ಅತಿಥಿಗೃಹದಲ್ಲಿ ಬಿಜೆಪಿ ವತಿಯಿಂದ ವಿಬಿ ಜಿ ರಾಮ್ ಜಿ ಯೋಜನೆಯ ಜಾಗೃತಿ ಸಭೆ ಆಯೋಜಿಸಲಾಗಿತ್ತು. ಬಿ.ಎನ್.ಸದಾನಂದ. ವೆಂಕಟಸ್ವಾಮಿ, ಎನ್.ಎಂ.ರಾಮಚಂದ್ರ, ಶಿವಕುಮಾರ್, ಮಹದೇವಸ್ವಾಮಿ ಇತರರು ಇದ್ದರು. 
ಮೈಸೂರು

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಯತ್ನ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಆರೋಪ
ತಿ.ನರಸೀಪುರ : ಆಡಳಿತ ವೈಫಲ್ಯವನ್ನ ಮುಚ್ಚಿಕೊಳ್ಳಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ವಿಬಿ ಜಿ ರಾಮ್‌ಜಿ ಯೋಜನೆ ಮುಂದಿಟ್ಟುಕೊಂಡು ಹೋರಾಟದ ನೆಪದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಬಿ.ಎನ್.ಸದಾನಂದ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಬಿಜೆಪಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಬಿ ಜಿ ರಾಮ್ ಜಿ ಯೋಜನೆಯ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮಹತ್ವದ ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಹಿಂದಿನ ನರೇಗಾ ಯೋಜನೆಯಲ್ಲಿ ಅನೇಕ ಸುಧಾರಣೆ ಮಾಡಿ, ಹೆಚ್ಚು ಪಾರದರ್ಶಕ ಹಾಗೂ ಫಲಪ್ರದವಾಗುವಂತೆ ಕೇಂದ್ರದ ಎನ್‌ಡಿಎ ಸರ್ಕಾರ ವಿಕಸಿತ ಭಾರತ ಉದ್ಯೋಗ ಹಾಗೂ ಜೀವನೋಪಾಯ ಗ್ಯಾರಂಟಿ ಮಿಷನ್(ವಿಬಿ ಜಿ ರಾಮ್ ಜಿ) ಕಾಯ್ದೆಯನ್ನು ಜಾರಿಗೆ ತಂದಿದೆ. ಇದು ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ಖಾತ್ರಿ, ಶಾಶ್ವತ ಆಸ್ತಿ ನಿರ್ಮಾಣ ಮತ್ತು ಕೌಶಲಾಭಿವೃದ್ಧಿಗೆ ಒತ್ತು ನೀಡುವ ಮಹತ್ವದ ಯೋಜನೆಯಾಗಿದೆ ಎಂದರು.
ಹಳೆಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಬೋಗಸ್ ಬಿಲ್‌ಗಳು, ಕೂಲಿ ಪಾವತಿಯಲ್ಲಿ ವಿಳಂಬ ಮತ್ತು ದಲ್ಲಾಳಿಗಳ ಹಾವಳಿ ಹೆಚ್ಚಾಗಿತ್ತು. ಹೊಸ ಯೋಜನೆಯಲ್ಲಿ ಬಯೋಮೆಟ್ರಿಕ್ ಹಾಜರಾತಿ, ಜಿಯೋ ಟ್ಯಾಗಿಂಗ್, ಜಿಪಿಎಸ್ ವ್ಯವಸ್ಥೆ ಹಾಗೂ ಕೃತಕ ತಂತ್ರಜ್ಞಾನ ಬಳಸಿ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ. ಕನಿಷ್ಠ ಶೇ.50 ರಷ್ಟು ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕವೇ ಅನುಷ್ಠಾನಗೊಳಿಸಲಾಗುತ್ತದೆ. ಇದರಿಂದ ಗ್ರಾಮೀಣ ಅಭಿವೃದ್ಧಿಗೆ ವೇಗ ಸಿಗಲಿದೆ. ಗಾಂಧೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಸಾಕಾರಗೊಳ್ಳಬೇಕಾದರೆ ಹಳ್ಳಿಗಳ ಅಭಿವೃದ್ಧಿ ಅಗತ್ಯ. ಗಾಂಧೀಜಿ, ಅಂಬೇಡ್ಕರ್ ಅವರ ಹೆಸರನ್ನು ಬಿಜೆಪಿ ಎಂದಿಗೂ ಅವಮಾನಿಸಿಲ್ಲ. ಆದರೆ ಕಾಂಗ್ರೆಸ್ ಇತಿಹಾಸದಲ್ಲೇ ಮಹಾಪುರುಷರ ಹೆಸರಲ್ಲಿ ರಾಜಕೀಯ ಮಾಡುವ ಪಕ್ಷ ಎಂದು ಹರಿಹಾಯ್ದರು.
 ತಿ.ನರಸೀಪುರ ಭಾಜಪ ಕ್ಷೇತ್ರಾಧ್ಯಕ್ಷ ಶಿವಕುಮಾರ್(ಸತ್ಯರಾಜ್) ಮಾತನಾಡಿ, ಮನರೇಗಾ ಯೋಜನೆಯಲ್ಲಿ ಗುತ್ತಿಗೆದಾರರ ಹಾವಳಿ, ಬೋಗಸ್ ಬಿಲ್‌ಗಳು ಮತ್ತು ಕೂಲಿ ಪಾವತಿ ವಿಳಂಬದ ಮೂಲಕ ನೂರಾರು ಕೋಟಿ ರೂ. ಲೂಟಿ ನಡೆಯುತ್ತಿತ್ತು. ಈ ಭ್ರಷ್ಟಾಚಾರವನ್ನು ತಡೆಯುವ ಉದ್ದೇಶದಿಂದ ಹೊಸ ಯೋಜನೆ ಜಾರಿಗೆ ತಂದಿರುವುದನ್ನು ಕಾಂಗ್ರೆಸ್ ಸಹಿಸಿಕೊಳ್ಳಲಾಗುತ್ತಿಲ್ಲ, ಪಾರದರ್ಶಕತೆ ತಂದಿರುವ ಯೋಜನೆಯ ವಿರುದ್ಧ ಹೋರಾಟ ನಡೆಸುವ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು.
ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್ (ಸತ್ಯರಾಜ್), ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಜಿಲ್ಲಾ ಕಾರ್ಯದರ್ಶಿ ದಯಾನಂದ ಪಟೇಲ್, ಪುರಸಭಾ ಮಾಜಿ ಸದಸ್ಯ ಎಸ್. ಕೆ.ಕಿರಣ್, ಗ್ರಾಂ.ಪಂ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಟೌನ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ, ಚೌಹಳ್ಳಿ ಸಿದ್ದರಾಜು, ಶಂಕರ್, ಕರೋಹಟ್ಟಿ ರಾಜಶೇಖರ್, ಪುಟ್ಟಸ್ವಾಮಿ ಇದ್ದರು.