ಯಳಂದೂರಿನ ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷ ವೈ.ಎಂ.ಜಯರಾಮ್ ಅವರನ್ನು ಬ್ಯಾಂಕ್ ಸಿಬ್ಬಂದಿ ಸನ್ಮಾನಿಸಿದರು. ರೇವಣ್ಣ, ರಾಜಶೇಖರ್, ರವಿ, ಮಹದೇವಸ್ವಾಮಿ, ರಾಜಪ್ಪ, ಶ್ರೀನಿವಾಸ್ ಇತರರಿದ್ದರು.
ಯಳಂದೂರು: ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್‌ನಲ್ಲಿ ಬ್ಯಾಂಕ್ ವತಿಯಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದ ವೈ.ಎಂ.ಜಯರಾಮ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಎರಡು ಅವಧಿಯಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೆ. ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್, ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಗಣೇಶ್‌ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಸೇರಿದಂತೆ ಅನೇಕರ ಸಹಕಾರದೊಂದಿಗೆ ನಮ್ಮ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಅವಿರೋಧವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನನ್ನನ್ನು ಸಾಮಾಜಿಕ ನ್ಯಾಯದಡಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶವನ್ನು ಮಾಡಿಕೊಟ್ಟಿದ್ದಾರೆ.
ಅಲ್ಲದೆ ತಾಲೂಕಿನ ಎಲ್ಲ ಸಹಕಾರ ಸಂಘಗಳು ನನ್ನನ್ನು ಬೆಂಬಲಿಸಿದ್ದು ಇದರ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೂ ಕೂಡ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ನನ್ನ ಅವಧಿಯಲ್ಲಿ ತಾಲೂಕಿಗೆ 100 ಕೋಟಿ ರೂ.ಗೂ ಅಧಿಕ ಸಾಲ ಸೌಲಭ್ಯವನ್ನು ರೈತರಿಗೆ ಕೊಡಿಸುವುದರ ಜತೆಗೆ ಸರ್ಕಾರದಿಂದ ಬ್ಯಾಂಕಿನ ಮೂಲಕ ಲಭಿಸುವ ಎಲ್ಲ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಮಾಡುತ್ತೇನೆ. ನಮ್ಮ ತಾಲೂಕು ಅತ್ಯಂತ ಚಿಕ್ಕ ತಾಲೂಕಾಗಿದ್ದು ಇಲ್ಲಿರುವ ಬ್ಯಾಂಕು ಹಾಗೂ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಎಲ್ಲ ಬ್ಯಾಂಕುಗಳಿಗೆ ಹೈಟೆಕ್ ಸ್ಪರ್ಶವನ್ನು ನೀಡುವ ಜತೆಗೆ ಈ ಬ್ಯಾಂಕುಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಯಳಂದೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರೇವಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಜಶೇಖರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ, ಎಂಸಿಡಿಸಿಸಿ ಬ್ಯಾಂಕ್ ನ ಮ್ಯಾನೇಜರ್ ಮಹದೇವಸ್ವಾಮಿ, ಮೇಲ್ವಿಚಾರಕ ರಾಜಪ್ಪ, ಶ್ರೀನಿವಾಸ್, ಶಿವಶಂಕರ, ಅಭಿಷೇಕ್ ,ಸುಧೀರ್, ರವಿ ಹಾಗೂ ಇತರರು ಹಾಜರಿದ್ದರು.