ಮೈಸೂರು ನಗರ ಬಿಜೆಪಿ ಮತ್ತು ಗ್ರಾಮಾಂತರ ಜಿಲ್ಲಾ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಟಿ.ಎಸ್.ಶ್ರೀವತ್ಸ, ಪ್ರತಾಪ್‌ಸಿಂಹ, ಎಲ್.ನಾಗೇಂದ್ರ, ರಘು ಕೌಟಿಲ್ಯ, ಎಸ್.ಮಹದೇವಯ್ಯ, ಶಿವಕುಮಾರ್ ಇತರರಿದ್ದರು.
ಮೈಸೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಎಂಬುವರನ್ನು ವಿವಸ್ತ್ರಗೊಳಿಸಿದ ಪ್ರಕರಣ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣವನ್ನು ಖಂಡಿಸಿ ಮೈಸೂರು ನಗರ ಬಿಜೆಪಿ ಮತ್ತು ಗ್ರಾಮಾಂತರ ಜಿಲ್ಲಾ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರ ವಿರುದ್ಧ ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ‘ಕಾಂಗ್ರೆಸ್ ಕೊನೆಗಾಣಿಸುವವರೆಗೆ ಧಿಕ್ಕಾರ’, ‘ಕಾನೂನು ಸುವ್ಯವಸ್ಥೆ ಹಳ್ಳಹಿಡಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’, ‘ಹಿಂದೂ ಹೆಣ್ಣು ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣ ವಿಫಲರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಮಾಜಘಾತುಕ ಚಟುವಟಿಕೆಗಳು ಹೆಚ್ಚಾಗಿದೆ ಎಂದು ಆರೋಪಿಸಿದರು.
ಮಹಿಳೆಯರ ಖಾತೆಗೆ ಐದು ಸಾವಿರ ಕೋಟಿ ರೂ. ಗೃಹಲಕ್ಷ್ಮಿ ಹಣವನ್ನು ಹಾಕಿಲ್ಲ. ಆ ಹಣ ಎಲ್ಲಿ ಹೋಯಿತು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ಮೈಸೂರು ಅರಮನೆ ಎದುರು ನಡೆದ ಸಿಲಿಂಡರ್ ಸ್ಛೋಟದಲ್ಲಿ ಮೃತಪಟ್ಟ ಇಬ್ಬರು ಮಹಿಳೆಯರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿಲ್ಲ. ರಾಜ್ಯದ ವಿಚಾರದಲ್ಲಿ ಮೌನವಾಗಿರುವ ಸಿಎಂ, ಕೇರಳಕ್ಕೆ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮಹಿಯನ್ನು ಕರೆದುಕೊಂಡು ಹೋಗಿ ರಕ್ಷಣೆ ಕೊಡಲಿಲ್ಲ. ಮಹಿಯನ್ನು ಪೊಲೀಸರು ವಿವಸ್ತ್ರಗೊಳಿಸಿದ್ದಾರೆ. ಶಾಸಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದವರನ್ನು ಬಂಧಿಸಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರಫುಲ್ಲಾ ಮಲ್ಲಾಡಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ಘಟನೆ ಆತಂಕ ಉಂಟುಮಾಡಿದೆ. ಮಹಿಳಾ ಕಾರ್ಯಕರ್ತೆಯನ್ನು ಬಂಧಿಸುವ ನೆಪದಲ್ಲಿ ಹಿಂಸೆ, ದೌರ್ಜನ್ಯ ಜತೆಗೆ ವಿವಸ್ತ್ರಗೊಳಿಸಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕುಂಬ್ರಳ್ಳಿ ಎನ್.ಸುಬ್ಬಣ್ಣ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಡೆ ಗೃಹಲಕ್ಷ್ಮಿ ಹಣ ಕೊಟ್ಟರೆ, ಮತ್ತೊಂದು ಕಡೆ ಮಹಿಳೆಯರ ಸುರಕ್ಷತೆ ಇಲ್ಲದಂತೆ ಮಾಡಿದ್ದಾರೆ. ಗೃಹಸಚಿವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿಫಲರಾಗಿದ್ದಾರೆ. ಅವರು ‘ಗೊತ್ತಿಲ್ಲ ಎನ್ನುವ’ ಮಂತ್ರಿಯಾಗಿದ್ದಾರೆ. ಇಲಾಖೆಯನ್ನು ನಡೆಸಲು ಶಕ್ತಿ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.
ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಮಹಿಳಾ ಕಾರ್ಯಕರ್ತೆಯನ್ನು ಬಂಧಿಸುವಾಗ ಆಕೆಯನ್ನು ವಿವಸ್ತ್ರಗೊಳಿಸಿರುವುದು ಅಕ್ಷಮ್ಯ ಅಪರಾಧ. ಈ ಸರ್ಕಾರ ಬಂದ ಮೇಲೆ ಯಾರಿಗೂ ಸುರಕ್ಷತೆ ಇಲ್ಲ. ಈ ವಿಚಾರದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೌಟಿಲ್ಯ ಆರ್.ರಘು ಮಾತನಾಡಿ, ರಾಜ್ಯದಲ್ಲಿ ಇರುವುದು ದುಶ್ಯಾಸನ ಸರ್ಕಾರ. ಸ್ತ್ರೀ ವಿರೋಧಿ, ಜನವಿರೋಧಿ ಸರ್ಕಾರವನ್ನು ಕೆಳಗಿಳಿಸುವ ತನಕವೂ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಸಂಸದ ಪ್ರತಾಪ್ ಸಿಂಹ,ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಕಾಂಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಶಿವಕುಮಾರ್, ಮಾಜಿ ಮೇಯರ್‌ಗಳಾದ ಸಂದೇಶ್ ಸ್ವಾಮಿ, ಶಿವಕುವಾರ್, ಮಾಜಿ ಉಪ ಮೇಯರ್ ಡಾ.ಎಂ.ಜೆ.ರೂಪಾ, ಮುಖಂಡರಾದ ಎಂ.ಅರುಣ್ ಕುಮಾರ್ ಗೌಡ, ಮೈ.ಪು.ರಾಜೇಶ್, ಎಂ.ಆರ್.ಬಾಲಕೃಷ್ಣ, ಬಿ.ಎಂ.ರಘು, ರಘುಮೂರ್ತಿ, ವಿ.ಸೋಮಸುಂದರ್,ಶಂಕರ್, ಸೌಮ್ಯ ಉಮೇಶ್,ಪ್ರಮೀಳಾ ಭರತ್, ಆರ್.ರವೀಂದ್ರ, ರಂಗಸ್ವಾಮಿ, ದಿನೇಶ್ ಗೌಡ, ಮಹೇಶ್ ರಾಜೇ ಅರಸ್, ಜೋಗಿ ಮಂಜು ಇತರರಿದ್ದರು.