ಅಮೆರಿಕ ಹಾಗೂ ಇಸ್ರೇಲ್ ನಡೆಸಿರುವ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಖಮೇನಿ ಮೃತಪಟ್ಟಿರುವ ಹಿನ್ನೆಲೆ ಪಟ್ಟಣದಲ್ಲಿರುವ ಶಿಯಾ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಮೀರ್ ಕಿಫಯತ್ ಆಲಿ, ಮೀರ್ ತಾಜದರ್ ಆಲಿ, ಮೀರ್ ವಾಜೀರ್ ಆಲಿ, ಮುಜಾಮ್ ಇತರರು ಇದ್ದರು.
- ಶಿಯಾ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ
ಪಿರಿಯಾಪಟ್ಟಣ: ಮಾತು ಮಾತಿಗೂ ಶಾಂತಿ ಮಂತ್ರ ಹೇಳುತ್ತಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇದೀಗ ಇರಾನ್ ಮೇಲೆ ದಾಳಿಗೆ ಮುಂದಾಗಿರುವುದು ಆತನ ವಂಚನೆಯನ್ನು ಬಿಂಬಿಸುತ್ತಿದೆ ಎಂದು ಪಟ್ಟಣದಲ್ಲಿರುವ ಶಿಯಾ ಮುಸ್ಲಿಂ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕ ಹಾಗೂ ಇಸ್ರೇಲ್ ನಡೆಸಿರುವ ಜಂಟಿ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯಾತೊಲ್ಲ ಆಲಿ ಖಮೇನಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿರುವ ಶಿಯಾ ಮುಸ್ಲಿಂ ಸಮುದಾಯ ಸಂತಾಪ ಸೂಚಿಸಿ ಕಪ್ಪು ಬಟ್ಟೆ ಧರಿಸಿ ಮೆಣದ ಬತ್ತಿಯ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಾಕಷ್ಟು ವಿದ್ಯಾರ್ಥಿಗಳು ಧಾರ್ಮಿಕ, ವೈದ್ಯಕೀಯ, ಇತರ ಶಿಕ್ಷಣದ ಸಲುವಾಗಿ ಇರಾನ್‌ನಲ್ಲಿ ನೆಲೆಸಿದ್ದು, ನೂರಾರು ಜನರು ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಇರಾನ್‌ನಲ್ಲಿ ಯುದ್ಧ ಸಂಭವಿಸಿದಾಗಲೆಲ್ಲ ಇಲ್ಲಿನ ಜನರ ಹೃದಯ ಮಿಡಿಯುತ್ತಿದ್ದು, ಖಮೇನಿ ಸಾವಿನ ಸುದ್ದಿಯಿಂದ ನಮ್ಮ ಸಮುದಾಯದಲ್ಲಿ ನೀರದ ಮೌನ ಆವರಿಸಿದೆ ಎಂದು ತಿಳಿಸಿದರು.
ಈ ರೀತಿಯ ಮೋಸದಾಟ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಧಿಕ್ಕಾರವಿರಲಿ ಎಂದು ಪ್ರತಿಭಟಿಸಿದರು. ಈ ಯುದ್ಧ ಅಗತ್ಯವಿರಲಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಟ್ರಂಪ್ ಈ ರೀತಿ ದ್ವಂದ್ವ ನೀತಿ ಅನುಸರಿಸಿ ಮೋಸ ಮಾಡಿದ್ದಾರೆ. ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶಿಯಾ ಸಮುದಾಯದ ಮಸೀದಿ ಅಧ್ಯಕ್ಷರು ಮೀರ್ ಕಿಫಯತ್ ಆಲಿ, ಕಾರ್ಯದರ್ಶಿ ಮೀರ್ ತಾಜದರ್ ಆಲಿ, ಮುಖಂಡರಾದ ಮೀರ್ ವಾಜೀರ್ ಆಲಿ, ಮುಜಾಮ್, ಕುಮೇಲ್, ರಾಯಾಜ್, ಸಿರಾಜ್ ಆಲಿ, ಆಲಿ ರಾಜ, ನಾಸಿರ್ ಆಲಿ, ಮಸ್ರತ್ ಆಲಿ, ರಿಯಾಜ್ ಆಲಿ, ಆಲಿ ಮದದ್, ಜಾವೀದ್ ಆಲಿ, ಮುಂತಾಕಬ್ ಆಲಿ, ಮುಬೀರ್ ಹುಸೈನ್ ಸೇರಿದಂತೆ ಇತರರು ಹಾಜರಿದ್ದರು.