dasara-film-festival 
ಮೈಸೂರು

ದಸರಾ ಚಲನಚಿತ್ರೋತ್ಸವ ರದ್ದತಿಗೆ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ಸದಭಿರುಚಿಯ ಚಿತ್ರಗಳ ಬಿಡುಗಡೆ ಪರಿಸರಕ್ಕಾಗಿ ನಾವು ಸಂಘಟನೆ ಆಗ್ರಹ
  • ಚಲನಚಿತ್ರೋತ್ಸವ ಆಯೋಜಿಸಲು ಲಾಭ ನಷ್ಟದ ಲೆಕ್ಕಾಚಾರ ಹಾಕಬಾರದು
  • ಸರ್ಕಾರ ತಕ್ಷಣ ಕಂಬಳದ ಸಿದ್ಧತೆ ನಿಲ್ಲಿಸಿ, ಚಲನಚಿತ್ರೋತ್ಸವವನ್ನು ಸೇರ್ಪಡೆ ಮಾಡಬೇಕು
ಮೈಸೂರು: ಇಷ್ಟು ವರ್ಷ ದಸರಾ ಮಹೋತ್ಸವದ ಅವಿಭಾಜ್ಯ ಅಂಗವಾಗಿದ್ದ ಚಲನಚಿತ್ರೋತ್ಸವ ಪ್ರೇಕ್ಷಕರ ಕೊರತೆ ಕಾರಣ ನೀಡಿ ರದ್ದುಪಡಿಸಿರುವ ಕ್ರಮವನ್ನು ‘ಪರಿಸರಕ್ಕಾಗಿ ನಾವು’ ಸಂಘಟನೆ ಖಂಡಿಸಿದೆ.
ದಸರಾ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ಕೊರತೆಯಾಗಲು ಇದಕ್ಕಾಗಿ ರಚಿತವಾಗುವ ಉಪಸಮಿತಿಯ ಅದಕ್ಷತೆ, ಕಾರ್ಯವೈಖರಿ ಕಾರಣ. ಸರಿಯಾದ ಮಾಹಿತಿ ಕೊಟ್ಟು ಸೂಕ್ತ ಪ್ರಚಾರ ಮಾಡಿದರೆ ಸಾಕಷ್ಟು ಪ್ರೇಕ್ಷಕರನ್ನು ಸೆಳೆಯಬಹುದು. 
ಸಮಾಜಕ್ಕೆ ಉತ್ತಮ ಸಂದೇಶ ಕೊಡುವ, ತಾಂತ್ರಿಕವಾಗಿ ಉತ್ಕೃಷ್ಟ ಮಟ್ಟದ ಮತ್ತು ಸದಭಿರುಚಿಯ ಚಿತ್ರಗಳನ್ನು ಈಗಲೂ ನೋಡಬಯಸುವ ಪ್ರೇಕ್ಷಕರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಲನಚಿತ್ರೋತ್ಸವ ಸೇರ್ಪಡೆ ಮಾಡದಿದ್ದರೆ ಸಿನಿಮಾ ರಂಗಕ್ಕೆ, ನಾಡಿನ ಪರಂಪರೆ, ಸಂಸ್ಕೃತಿಗೆ ಮಾಡುವ ಅವಮಾನ. ಚಲನಚಿತ್ರೋತ್ಸವ ಸೇರ್ಪಡೆ ಮಾಡಿದರೆ ಮಾತ್ರ ಕನ್ನಡ ಸಿನಿಮಾದ ನಟ, ನಟಿಯರು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತೇವೆ, ಇಲ್ಲದಿದ್ದರೆ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಬೇಕು ಎಂದೂ ಕೋರಿದ್ದಾರೆ.
ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಷ್, ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಎಂ.ಆರ್. ವಿಠಲ್, ವಿ.ಕೆ.ಮೂರ್ತಿಯಂತಹ ಕನ್ನಡ ಸಿನಿಮಾದ ದಿಗ್ಗಜರು ಮೈಸೂರು ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಇತಿಹಾಸ ನಮ್ಮ ಕಣ್ಮುಂದಿದೆ. ಇದನ್ನು ಸರ್ಕಾರ ಕಡೆಗಣಿಸಬಾರದು. ಚಲನಚಿತ್ರೋತ್ಸವ ಆಯೋಜಿಸಲು ಲಾಭ ನಷ್ಟದ ಲೆಕ್ಕಾಚಾರ ಹಾಕಬಾರದು ಎಂದು ಹೇಳಿದ್ದಾರೆ.
ಚಲನಚಿತ್ರೋತ್ಸವಕ್ಕೆ 40-45 ಲಕ್ಷ ರೂ. ಮಾತ್ರ ಖರ್ಚು ಆಗುತ್ತದೆ. ಆದರೆ 10-12 ಕೋಟಿ ರೂ. ಖರ್ಚು ಮಾಡಿ ಯಾರಿಗೂ ಬೇಡವಾದ ಕರಾವಳಿಯ ಗ್ರಾಮೀಣ ಕ್ರೀಡೆ ಕಂಬಳ ಮಾಡಲು ಉತ್ಸುಕವಾಗಿರುವ ಸರ್ಕಾರದ ನಡೆ ವಿವೇಕಯುತವಾದುದಲ್ಲ. ಸರ್ಕಾರ ತಕ್ಷಣ ಕಂಬಳದ ಸಿದ್ಧತೆ ನಿಲ್ಲಿಸಿ, ಚಲನಚಿತ್ರೋತ್ಸವವನ್ನು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.