ಹುಣಸೂರು ತಾಲೂಕು ಗಾವಡಗೆರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಶಸ್ತಿಗೆ ಭಾಜನವಾದ ಗಾವಡಗೆರೆ ಕರ್ನಾಟಕ ಪಬ್ಲಿಕ್ ಶಾಲೆ ಕ್ರೀಡಾಪಟುಗಳೊಂದಿಗೆ ಅಧ್ಯಾಪಕರು.
ಹುಣಸೂರು : ಪ್ರಸಕ್ತ ಸಾಲಿನ ಗಾವಡಗೆರೆ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಗಾವಡಗೆರೆಯ ಕರ್ನಾಟಕ ಪಬ್ಲಿಕ್ ಶಾಲೆ (ಪ್ರೌಢಶಾಲಾ ವಿಭಾಗ) ಸಮಗ್ರ ಪ್ರಶಸ್ತಿಗೆ ಭಾಜನವಾಗಿದೆ.
ಆ.27 ಮತ್ತು 28ರಂದು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಗುಂಪು ಕ್ರೀಡೆಗಳಲ್ಲಿ ಸಾಧನೆಗೈದು ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.
100ಮೀ.ಮತ್ತು 200ಮೀ. ಓಟದಲ್ಲಿ ಪ್ರಥಮ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ ಕ್ರೀಡಾಪಟು ರವಿನಂದನ್ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬಾಲಕರ ವಿಭಾಗದ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ 100ಮೀ. 200ಮೀ. 400ಮೀ, 3000 ಮೀ. ಓಟ ಮತ್ತು 5 ಕಿ.ಮೀ. ನಡಿಗೆ, ಗುಂಡು ಎಸೆತ, ಚಕ್ರ ಎಸೆತ ಮತ್ತು ತ್ರಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 800 ಮೀ. ಮತ್ತು 1,500ಮೀ.ಓಟ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ತ್ರಿವಿಧ ಜಿಗಿತ ಮತ್ತು 3 ಕಿ.ಮೀ. ನಡಿಗೆಯಲ್ಲಿ ಪ್ರಥಮ, 100 ಮೀ., 200 ಮೀ., 400ಮೀ., 800 ಮೀ., 15,00ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಗುಂಪು ಸ್ಪರ್ಧೆಗಳಲ್ಲಿ ಬಾಲಕರು ಕಬ್ಬಡ್ಡಿ, ವಾಲಿಬಾಲ್‌ನಲ್ಲಿ ಪ್ರಥಮ, ಖೋಖೋದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯರು ಕಬ್ಬಡ್ಡಿಯಲ್ಲಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಹಾಗೂ ಖೋ ಖೋ ದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕ್ರೀಡಾಪಟುಗಳ ಸಾಧನೆಯನ್ನು ಪ್ರಸಂಸಿಸಿ ಉಪಪ್ರಾಂಶುಪಾಲರು, ಎಸ್‌ಡಿಎಂಸಿ ಸಮಿತಿ, ಶಿಕ್ಷಕರು ಮತ್ತು ಪಾಲಕರು ಅಭಿನಂದಿಸಿದ್ದಾರೆ.