ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಐಸಿಎಸ್‌ಐ-ಮೈಸೂರು ಘಟಕದಲ್ಲಿ ಆಯೋಜಿಸಿದ್ದ ಕಾರ್ಪೋರೆಟ್ ಲಾ-360 ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಗೋಪಾಲಕೃಷ್ಣ ಹೆಗಡೆ, ನಾಗೇಂದ್ರ ರಾವ್, ಮಂಜುಗೌಡ ಇನ್ನಿತರರಿದ್ದರು
- ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ
- ಕಾರ್ಪೋರೆಟ್ ಲಾ-360 ಕಾರ್ಯಕ್ರಮ
ಮೈಸೂರು: ದೇಶದ ಆರ್ಥಿಕತೆ ಬೆಳವಣಿಗೆಯಲ್ಲಿ ಕಾರ್ಪೋರೆಟ್ ಕಂಪನಿಗಳ ಕಾರ್ಯದರ್ಶಿಗಳ ಪಾತ್ರ ಮಹತ್ವದಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ವತಿಯಿಂದ ನಗರದ ಕೆಆರ್‌ಎಸ್ ರಸ್ತೆಯಲ್ಲಿರುವ ಐಸಿಎಸ್‌ಐ-ಮೈಸೂರು ಘಟಕದಲ್ಲಿ ಆಯೋಜಿಸಿದ್ದ ಕಾರ್ಪೋರೆಟ್ ಲಾ-360 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕಂಪನಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಕಂಪನಿಗಳು ಸೂಕ್ತವಾಗಿ ಬೆಳೆಯಲು ಕೇವಲ ವ್ಯವಹಾರವೇ ಸಾಕಾಗುವುದಿಲ್ಲ. ಅವು ಕಾನೂನು ಬದ್ಧವಾಗಿ ನಿಯಮಾನುಸಾರವಾಗಿ ನಡೆಯಬೇಕು. ಅದನ್ನು ಖಚಿತ ಪಡಿಸಿಕೊಳ್ಳುವಲ್ಲಿ ಕಂಪನಿಯ ಕಾರ್ಯದರ್ಶಿಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಕಂಪನಿಗಳು ಯಾವ ನಿಯಮ ಪಾಲಿಸಬೇಕು. ಕಾನೂನುಗಳ ವಿಚಾರವಾಗಿ ನಿರ್ಧಾರ ಹೇಗೆ ತೆಗೆದುಕೊಳ್ಳಬೇಕು. ಕಾನೂನುಗಳಿಗೆ ಅನುಗುಣವಾಗಿ ಕಂಪನಿಯನ್ನು ಹೇಗೆ ನಡೆಸಬೇಕು ಎಂಬುದರಲ್ಲಿ ಕಾರ್ಯದರ್ಶಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅದಕ್ಕಾಗಿ ಕಂಪನಿ ಕಾರ್ಯದರ್ಶಿಗಳ ಸೇವೆಯು ಕೇವಲ ಕಂಪನಿಗಳಿಗೆ ಸೀಮಿತವಾಗಿರುವುದಿಲ್ಲ. ಬದಲಿಗೆ ದೇಶದ ಅಭಿವೃದ್ಧಿಗೂ ಮುಖ್ಯವಾಗಿದೆ ಎಂದು ಪ್ರತಿಪಾದಿಸಿದರು.
ಈ ಎರಡು ದಿನಗಳ ಕಾಲ ಕಂಪನಿಗಳ ಕಾನೂನು ಪಾಲನೆ, ಹಣಕಾಸು ವ್ಯವಹಾರಗಳು, ಆದಾಯ ವೆಚ್ಚಗಳ ನಿರ್ವಹಣೆ, ಸಾಲದ ಸಮಸ್ಯೆಗಳು, ದಿವಾಳಿತನಕ್ಕೆ ಸಂಬಂಧಿಸಿದ ಕಾನೂನುಗಳು ಹಾಗೂ ವಿದೇಶಿ ಹೂಡಿಕೆಗಳ ಬಗ್ಗೆ ಚರ್ಚೆ ನಡೆಯುವುದು ಬಹಳ ಉಪಯುಕ್ತವಾಗಿದೆ. ಈ ವಿಷಯಗಳು ಇಂದಿನ ಕಾಲದಲ್ಲಿ ಪ್ರಸ್ತುತವಾಗಿವೆ ಮತ್ತು ನಿಮ್ಮಗೆಲ್ಲರಿಗೆ ಉತ್ತಮ ತಿಳಿವಳಿಕೆ ನೀಡಲಿವೆ ಎಂದರು.
ಕಂಪನಿಗಳು ಪ್ರತಿಯೊಬ್ಬರಿಗೂ ಅಗತ್ಯವಿದೆ. ಕೃಷಿಯ ಕ್ಷೇತ್ರವೂ ದೇಶದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಈ ಕ್ಷೇತ್ರವನ್ನು ಬಿಟ್ಟರೆ ಕಂಪನಿಗಳ ಮೂಲಕ ಸಾರ್ವಜನಿಕರು ಆರ್ಥಿಕ ಸಬಲರಾಗುತ್ತಿದ್ದಾರೆ. ಇಂತಹ ಉದ್ಯಮಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು. ಇದಕ್ಕಾಗಿ ಕೌಶಲ ಮತ್ತು ಕಾನೂನಿನ ಅರಿವು ಅಗತ್ಯ ಎಂದು ಹೇಳಿದರು.
ಸಂಸ್ಥೆಗಳು ಎದುರಿಸುತ್ತಿರುವ ರಸ್ತೆ ಸಮಸ್ಯೆಯ ಬಗ್ಗೆ ನನ್ನ ಗಮನಕ್ಕೆ ತರಲಾಗಿದೆ. ಈ ವಿಷಯದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಾಧ್ಯವಾದ ಮಟ್ಟಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನಿಡಿದರು. ಸಂಸ್ಥೆಯ ಗೋಪಾಲಕೃಷ್ಣ ಹೆಗಡೆ, ನಾಗೇಂದ್ರ ರಾವ್, ಮಂಜುಗೌಡ, ಅಭಿಷೇಕ್ ಭಾರದ್ವಾಜ್, ಕೀರ್ತನ ಗೋಪಾಲ್ ಇದ್ದರು.