ಕೆ.ಆರ್.ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹೈಟೆಕ್ ತಂಗುದಾಣ ಮತ್ತು ಬಸ್ ನಿಲ್ದಾಣದ ಎರಡು ಮುಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು. ಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಶಿವುನಾಯಕ್, ಸೈಯದ್ ಸಿದ್ದಿಕ್, ಶಂಕರಸ್ವಾಮಿ, ಶಂಕರ್, ರಮೇಶ್, ಕೆ.ಎನ್.ಪ್ರಸನ್ನಕುಮಾರ್, ಕುಮಾರ್ ಇದ್ದರು. 
ಮೈಸೂರು

ಎರಡು ತಾಲೂಕುಗಳ ಅಭಿವೃದ್ಧಿಗೆ ಬದ್ಧ

ರವಿಕುಮಾರ್ ಪಿ. ಕೆ
ಕೆ.ಆರ್.ನಗರ: ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಕೇಂದ್ರಗಳಾಗಿದ್ದು ಎರಡು ಪಟ್ಟಣಗಳನ್ನು ಸಮಗ್ರ ಅಭಿವೃದ್ಧಿ ಮಾಡಲು ನಾನು ಕಂಕಣ ಬದ್ಧನಾಗಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೈಸೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಹೈಟೆಕ್ ತಂಗುದಾಣ ಮತ್ತು ಬಸ್ಸ್ ನಿಲ್ದಾಣದ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಎರಡು ಬದಿಯ ರಸ್ತೆ ಹಾಗೂ ತಂಗುದಾಣವನ್ನು 1.30 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯ ರಸ್ತೆಗಳಷ್ಟೇ ಅಲ್ಲದೆ ಪಟ್ಟಣಕ್ಕೆ ವಿವಿಧ ಭಾಗಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಮುಖ್ಯವಾಗಿದೆ ಎಂದರು.
ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಓಡಾಡುತ್ತಿರುವುದರಿಂದ ಬಸ್‌ಗಳ ಕೊರತೆ ಇದ್ದು ಹೆಚ್ಚು ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಶೀಘ್ರ ಹೊಸ ಬಸ್‌ಗಳ ಖರೀದಿಗೆ ಮುಂದಾಗಿದೆ. ಆ ಸಮಯದಲ್ಲಿ ಕೆ.ಆರ್.ನಗರಕ್ಕೆ ಹೆಚ್ಚು ಬಸ್‌ಗಳನ್ನು ನೀಡುವಂತೆ ಕೋರಲಾಗಿದೆ. ಮೈಸೂರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು ಈಗಿರುವ ಬಸ್‌ಗಳ ಜತೆಗೆ ಹೆಚ್ಚುವರಿಯಾಗಿ ಅಗತ್ಯವಾದಷ್ಟು ಬಸ್‌ಗಳನ್ನು ಮೈಸೂರು-ಕೆ.ಆರ್.ನಗರಕ್ಕೆ ಬಿಡುವಂತೆ ಸ್ಥಳದಲ್ಲಿದ್ದ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಗಳು ಶಾಸಕರಿಗೆ ನೀಡಿರುವ ವಿಶೇಷ ಅನುದಾನದಲ್ಲಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳ ಅಭಿವೃದ್ಧಿ ಕೆಲಸಗಳಿಗೆ 7.50 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಎಲ್ಲ ಬಡಾವಣೆಗಳ ಪ್ರಮುಖ ರಸ್ತೆಗಳು ಅಭಿವೃದ್ಧಿ ಹೊಂದಲಿವೆ. ರೇಡಿಯೋ ಮೈದಾನ ಮತ್ತು ಕ್ರೀಡಾಂಗಣ ಅಭಿವೃದ್ಧಿಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದರು.
ಎಸ್‌ಸಿಪಿ ಅನುದಾನದಲ್ಲಿ ಪಟ್ಟಣದ 4, 5, 12, 22 ಹಾಗೂ 23 ನೇ ವಾರ್ಡ್‌ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲಾಗಿದೆ. ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಕೋಳಿ ಪ್ರಕಾಶ್, ಕೆ.ಜಿ.ಸುಬ್ರಮಣ್ಯ, ಶಿವುನಾಯಕ್, ಸೈಯದ್ ಸಿದ್ದಿಕ್, ಮಾಜಿ ಸದಸ್ಯ ವಿನಯ್ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್.ಪ್ರಸನ್ನಕುಮಾರ್, ಸವಿತಾ ಜವರಪ್ಪ, ಪುರಸಭೆ ಮಾಜಿ ಸದಸ್ಯ ನಟರಾಜು, ಶಂಕರಸ್ವಾಮಿ, ಮಿಕ್ಸರ್ ಶಂಕರ್, ಮುಖ್ಯಾಧಿಕಾರಿ ರಮೇಶ್, ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಕುಮಾರ್, ಮುಖಂಡರಾದ ನವೀದ್, ಚೀರ‌್ನಹಳ್ಳಿ ಸಿ.ಪಿ.ಶಂಕರ್, ಮಧುವನಹಳ್ಳಿ ಆದರ್ಶ, ಅನಿಲ್, ಕಾಮಧೇನು ಧರ್ಮ ಇದ್ದರು.