ಡಾ.ಶಿವಕುಮಾರ ಮಹಾಸ್ವಾಮೀಜಿ ಭಕ್ತಮಂಡಳಿ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಮೈಸೂರು ನಗರದಲ್ಲಿ ಮೆರವಣಿಗೆ ನಡೆಯಿತು. 
ಮೈಸೂರು

ಮೈಸೂರಿನಲ್ಲಿ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

ಮೈಸೂರು: ನಗರದ ವಿವಿಧೆಡೆ ಬುಧವಾರ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.
ಡಾ.ಶಿವಕುಮಾರ ಮಹಾಸ್ವಾಮೀಜಿ ಭಕ್ತಮಂಡಳಿ ವತಿಯಿಂದ ಅಗ್ರಹಾರದ 101 ಗಣಪತಿ ದೇವಸ್ಥಾನದ ಬಳಿ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಹಾಗೂ ದಾಸೋಹ ಕಾರ್ಯಕ್ರಮ ನಡೆಯಿತು.
ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಮೆರವಣಿಗೆ ಆಯೋಜಿಸಲಾಗಿತ್ತು. ಜಗಜ್ಯೋತಿ ಬಸವಣ್ಣ, ಗುರುಮಲ್ಲೇಶ್ವರರು, ಶಿವಕುಮಾರ ಸ್ವಾಮೀಜಿ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಅಗ್ರಹಾರ ವೃತ್ತದಿಂದ ಪ್ರಾರಂಭದ ಮೆರವಣಿಗೆಗೆ ನಂದಿಕಂಬ, ವೀರಗಾಸೆ, ಪೂಜಾಕುಣಿತ, ಡೊಳ್ಳುಕುಣಿತ, ಪಟದ ಕುಣಿತ, ಭಜನೆ, ವಾದ್ಯಗೋಷ್ಠಿ ಸೇರಿದಂತೆ ವಿವಿಧ ಕಲಾತಂಡಗಳು ಮೆರಗು ನೀಡಿತು. ಮೆರವಣಿಗೆಯು ತ್ಯಾಗರಾಜ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಸ್‌ಎಸ್ ಮಹಾ ವಿದ್ಯಾಪೀಠದ ಬಳಿಯಿರುವ ಬಸವ ಪುತ್ಥಳಿ, ರಾಮಾನುಜ ರಸ್ತೆಯ ಮೂಲಕ ಸಾಗಿ 101 ಗಣಪತಿ ದೇವಸ್ಥಾನದ ಬಳಿ ಅಂತ್ಯವಾಯಿತು.
ಶ್ರೀ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಶ್ರೀ ದೇವಲಾಪುರ ಮಠದ ಶ್ರೀ ಜಡೆ ಸ್ವಾಮೀಜಿ, ಶಾಸಕ ಟಿ.ಎಸ್.ಶ್ರೀವತ್ಸ, ನಗರ ಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡ ವಸಂತಕುಮಾರ್, ಕಾಂಗ್ರೆಸ್ ಮುಖಂಡ ಪ್ರದೀಪ್‌ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಹಾಗೂ ಇತರರು ಇದ್ದರು.
ಶ್ರೀರಾಮ ಗೆಳೆಯರ ಬಳಗ: ಚಾಮುಂಡಿಪುರಂನಲ್ಲಿ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಪ್ರಯುಕ್ತ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಬಳಗದ ಅಧ್ಯಕ್ಷ ಸಂದೀಪ್ ಚಂದ್ರಶೇಖರ್ ಮಾತನಾಡಿ, ನಡೆದಾಡುವ ದೇವರು, ಅಭಿನವ ಬಸವಣ್ಣ ಎಂದೇ ಖ್ಯಾತರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬದುಕು ನಮಗೆಲ್ಲರಿಗೂ ದಾರಿದೀಪ. ಅನ್ನ ದಾಸೋಹದ ಜತೆಗೆ ಶಿಕ್ಷಣ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳ ಬಾಳಿಗೆ ಬೆಳಕಾದ ಅವರ ಸಾಮಾಜಿಕ ಕಳಕಳಿ ಸಮಾಜಕ್ಕೆ ಎಂದೆಂದಿಗೂ ಆದರ್ಶ ಎಂದು ಸ್ಮರಿಸಿದರು.
ಈ ವೇಳೆ ಶಾಸಕ ಟಿ.ಎಸ್.ಶ್ರೀವತ್ಸ ಸಾರ್ವಜನಿಕರು ಪ್ರಸಾದ ವಿತರಿಸಿದರು. ಈ ಸಂದರ್ಭ ವಿವಿಧ ಸಂಘಟನೆಗಳ ಪ್ರಮುಖರಾದ ಅಮರನಾಥ್ ರಾಜೇ ಅರಸ್, ನಾಗರಾಜ್, ಜೋಗಿ ಮಂಜು, ಸೋಮಸುಂದರ್, ವಿದ್ಯಾ ಅರಸ್, ಜಗದೀಶ್ ಲಿಂಗಣ್ಣ, ಗಿರೀಶ್, ಬಸವಣ್ಣ, ಬಸಪ್ಪ, ಸೌಭಾಗ್ಯ ಮೂರ್ತಿ, ಮಂಜುಳಾ, ವಿಜಯಾ, ಪ್ರಕಾಶ್ ಹಾಗೂ ಇತರರು ಇದ್ದರು.
ಭಕ್ತವೃಂದ: ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ಭಕ್ತವೃಂದದಿಂದ ಶ್ರೀಗಳ 7ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ಭಕ್ತವೃಂದದ ಕೆ.ಆರ್.ದೀಪು, ರಜನೀಶ್, ತ್ರಿಶೂಲ್, ಗಿರೀಶ್, ರಾಜು, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೋಳ ಜಗದೀಶ್, ಎಸ್.ಎನ್.ರಾಜೇಶ್, ದೂರ ರಾಜಣ್ಣ, ಸತ್ಯಾನಂದ ವಿಟ್ಟು, ರಾಕೇಶ್, ಬಸವರಾಜ್, ಅಭಿಲಾಶ್ ಇದ್ದರು.