ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಸಭೆ ನಡೆಸಿದರು. 
ಮೈಸೂರು

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮೈಸೂರಿನಲ್ಲಿ ದೇಣಿಗೆ ಸಂಗ್ರಹ

ಪ್ರಮುಖ ಮುಖ್ಯಾಂಶಗಳು

  • ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮೈಸೂರಿನಲ್ಲಿ ಸಭೆ
  • ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಕಾರ್ಯಕಾರಿ, ಕಾರ್ಯಪಡೆ ಹಾಗೂ ಸರ್ವ ಸದಸ್ಯರ ಸಭೆ ಆಯೋಜನೆ
  • ಮೈಸೂರಿನಲ್ಲಿ 20 ಮಕ್ಕಳ ರಕ್ಷಣೆ
ಮೈಸೂರು: ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಬಾಲ ಕಾರ್ಮಿಕ ಮುಕ್ತ ರಾಜ್ಯವನ್ನಾಗಿಸಲು ಕಾರ್ಮಿಕ ಇಲಾಖೆ ಆಯುಕ್ತರು ದೇಣಿಗೆ ಸಂಗ್ರಹಿಸಲು ಸೂಚನೆ ನೀಡಿದ್ದು, ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಪ್ರತ್ಯೇಕ ಖಾತೆ ತೆರೆದು ಪ್ರಚಾರ ನೀಡುವಂತೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಕಾರ್ಯಕಾರಿ, ಕಾರ್ಯಪಡೆ ಹಾಗೂ ಸರ್ವ ಸದಸ್ಯರ ಸಮಿತಿ ಸಭೆ ನಡೆಸಿ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಪುನರ್ವಸತಿ ದೇಣಿಗೆ ಸಂಗ್ರಹಿಸಲು ತೆರೆಯಲಾಗುವ ಖಾತೆಯನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧೀಕ್ಷರು ಹಾಗೂ ನಿರೀಕ್ಷಕರಿಗೆ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ವ್ಯಕ್ತಿಗಳಿಂದ ಆನ್‌ಲೈನ್ ಮೂಲಕ ತರಬೇತಿಗಳನ್ನು ಆಯೋಜಿಸಿ ಎಂದು ಸಲಹೆ ನೀಡಿದರು.
ಬಾಲಕಾರ್ಮಿಕರನ್ನು ರಕ್ಷಣೆ ಮಾಡಿ ಪುನವರ್ಸತಿ ಕಲ್ಪಿಸುವ ಸಂದರ್ಭದಲ್ಲಿ ಅವರ ಪಾಲಕರ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಂಡ ನಂತರ ಅವರ ಆರ್ಥಿಕ ಸ್ಥಿತಿಯಲ್ಲಿ ತೊಂದರೆಯಿದ್ದಲ್ಲಿ ಅವರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಹಾಗೂ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪ್ರಮಾಣ ಕಡಿಮೆಯಾಗುತ್ತದೆ ಎಂದರು.
ಜಿಲ್ಲಾ ಮಟ್ಟದಲ್ಲಿ ಪ್ರತಿ ಮಾಹೆ ನಡೆಯುವ ಕಾರ್ಯಕಾರಿ, ಕಾರ್ಯಪಡೆ ಹಾಗೂ ಸರ್ವ ಸದಸ್ಯರ ಸಭೆಯ ರೀತಿಯಲ್ಲಿಯೇ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು. ದಾಳಿ ನಡೆಸಿದ ಸಂದರ್ಭದಲ್ಲಿ ರಕ್ಷಣೆ ಮಾಡುವ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಪ್ರತ್ಯೇಕವಾಗಿ ಸದರಿ ಮಕ್ಕಳಿಗೆ ವಸತಿ ಶಾಲೆ ತೆರೆಯುವ ಬಗ್ಗೆ ವಿಸ್ತಾರವಾಗಿ ಅಧ್ಯಯನ ಮಾಡಿ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಅವರ ಮಕ್ಕಳನ್ನು ಕೆಲಸಕ್ಕೆ ಕಳುಹಿಸದೆ ಅವರನ್ನು ಶಾಲೆಗೆ ದಾಖಲಿಸು ವುದು, ಪೌಷ್ಟಿಕ ಆಹಾರ ಸೇವನೆ ಕುರಿತಂತೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.
ಕಾರ್ಮಿಕ ಇಲಾಖೆ ಉಪ ಆಯುಕ್ತೆ ಲಲಿತಾ ಬಾಯ್ ಮಾತನಾಡಿ, 2025-26ನೇ ಸಾಲಿನಲ್ಲಿ ಏಪ್ರಿಲ್ ನಿಂದ ಅಕ್ಟೋಬರ್‌ಮಾಹೆಯವರೆಗೆ 742 ದಾಳಿ ನಡೆಸಲಾಗಿದ್ದು, 3 ಬಾಲ ಕಾರ್ಮಿಕರನ್ನು ಹಾಗೂ 17 ಕಿಶೋರ ಕಾರ್ಮಿಕರು ಒಟ್ಟು 20 ಬಾಲ ಕಾರ್ಮಿಕರನ್ನು ಪತ್ತೆ  ಹಚ್ಚಿ ಪ್ರಕರಣ ದಾಖಲಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಮಿಕ ಅಧಿಕಾರಿ ಚೇತನ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉದಯ್ ಕುಮಾರ್, ಮಡಿಲು ಸಂಸ್ಥೆಯ ಶ್ರೀನಿವಾಸ್ ಹಾಗೂ ಇತರರು ಇದ್ದರು.