ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿದರು. ತನ್ವೀರ್ ಸೇಠ್, ಡಾ.ಬಿ.ಜೆ.ವಿಜಯ್ ಕುಮಾರ್, ಆರ್.ಮೂರ್ತಿ, ಕೆ. ಹರೀಶ್ ಗೌಡ ಇತರರಿದ್ದರು.
- ಪಕ್ಷ ಹಾಗೂ ಸರ್ಕಾರ ಸಮನ್ವಯತೆಯಿಂದ ನಡೆದಾಗ ಮಾತ್ರ ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನಡೆಸಲು ಸಾಧ್ಯ
- ಕಾಂಗ್ರೆಸ್ ನಮಗೆ ಅಧಿಕಾರ ಕೊಟ್ಟಿದೆ. ಕಾಂಗ್ರೆಸ್ ಇಲ್ಲದೇ ಹೋದರೆ ನಾವ್ಯಾರು ಇಲ್ಲ. ಒಂದು ದೇಶ, ಒಂದು ಚುನಾವಣೆ, ಒಂದು ಧರ್ಮ ಎಂಬ ಸಂವಿಧಾನದ ವಿರೋಧಿ ಕುತಂತ್ರಗಳನ್ನು ಬಿಜೆಪಿ ಮತಾಡುತ್ತಿದೆ
- ಈ ಅಭಿಯಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿ ಇದ್ದು, ಈವರೆಗೆ 1.25 ಕೋಟಿ ಸಹಿ ಸಂಗ್ರಹ ಆಗಿದೆ
ಮೈಸೂರು: ಪ್ರತಿಯೊಬ್ಬ ಕಾರ್ಯಕರ್ತರು ಕೂಡ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿ ದೇಶ ಉಳಿಸುವ ರಾಹುಲ್ ಗಾಂಧಿಯವರ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಜಿಲ್ಲೆಯ ಶಾಸಕರು ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳ ಸಭೆಯಲ್ಲಿ ಮಾತನಾಡಿದರು.
ಪಕ್ಷ ಹಾಗೂ ಸರ್ಕಾರ ಸಮನ್ವಯತೆಯಿಂದ ನಡೆದಾಗ ಮಾತ್ರ ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನಡೆಸಲು ಸಾಧ್ಯ. ಹಾಗೆಯೇ ನಾವುಗಳು ಮಂತ್ರಿ ಹಾಗೂ ಶಾಸಕರಾಗಲು ಪ್ರಾಮಾಣಿಕ ಕಾರ್ಯಕರ್ತರೇ ಮೂಲ ಕಾರಣ. ನಾಯಕ ರಾಹುಲ್ ಗಾಂಧಿ ಅವರು ವೋಟ್ ಚೋರಿ ಬಗ್ಗೆ ಬೆಳಕು ಚೆಲ್ಲಿದ್ದು, ಈ ಬಗ್ಗೆ ಪಕ್ಷದ ಕಾಯರ್ಕರ್ತರು ಬೂತ್ ಮಟ್ಟದಲ್ಲಿ ಬೆಳಕು ಚೆಲ್ಲಬೇಕು ಎಂದರು.
ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನ ಶುರುವಾದ ನಂತರ ದೇಶದಾದ್ಯಂತ ರಾಹುಲ್ ಗಾಂಧಿ ಅವರನ್ನು 35 ಕೋಟಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸಿದ್ದಾರೆ. ತಮ್ಮ ಮತಗಟ್ಟೆಗಳಲ್ಲಿ ನಡೆಯುತ್ತಿರುವ ವಿವಿಧ ಬಗೆಯ ಪಿತೂರಿಗಳನ್ನು ಬಿಚ್ಚಿಡುತ್ತಿದ್ದಾರೆ ಎಂದರು.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1.5 ಲಕ್ಷ ವೋಟ್ ಚೋರಿ ಆಗಿದೆ ಎಂದು ಹೇಳಿದ ಅವರು, ಅದರ ಸಂಪೂರ್ಣ ಮಾಹಿತಿ ರಾಹುಲ್ ಗಾಂಧಿ ಅವರಿಗೆ ಕೊಟ್ಟಿದ್ದೇವೆ. ಅದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಕೆಪಿಸಿಸಿ ನಮಗೆ ಸೂಚಿಸಿರುವ ಒಂದು ಕ್ಷೇತ್ರದಿಂದ ಕನಿಷ್ಠ 50 ಸಾವಿರ ಸಹಿಗಳನ್ನು ಸಂಗ್ರಹ ಮಾಡಿ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಮಾಡಿ ನಂತರ ರಾಷ್ಟ್ರಪತಿಗಳಿಗೆ ಎಲ್ಲ ಸಹಿಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ಇದಾಗಿದೆ ಎಂದರು.
ಈ ಅಭಿಯಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿ ಇದ್ದು, ಈವರೆಗೆ 1.25 ಕೋಟಿ ಸಹಿ ಸಂಗ್ರಹ ಆಗಿದೆ ಎಂಬ ಮಾಹಿತಿ ನೀಡಿದರು. ಈ ಸಹಿ ಸಂಗ್ರಹ ಅಭಿಯಾನ ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಪಾಲಿಗೆ ಮಹತ್ವವಾದ ಅಭಿಯಾನವಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಇದರಲ್ಲಿ ಭಾಗವಹಿಸಿ ಸಹಿ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿ ಪಕ್ಷ ಮತ್ತು ದೇಶವನ್ನು ಉಳಿಸುವ ರಾಹುಲ್ ಗಾಂಧಿಯವರ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಕಾಂಗ್ರೆಸ್ ನಮಗೆ ಅಧಿಕಾರ ಕೊಟ್ಟಿದೆ. ಕಾಂಗ್ರೆಸ್ ಇಲ್ಲದೇ ಹೋದರೆ ನಾವ್ಯಾರು ಇಲ್ಲ. ಒಂದು ದೇಶ, ಒಂದು ಚುನಾವಣೆ, ಒಂದು ಧರ್ಮ ಎಂಬ ಸಂವಿಧಾನದ ವಿರೋಧಿ ಕುತಂತ್ರಗಳನ್ನು ಬಿಜೆಪಿ ಮತಾಡುತ್ತಿದೆ. ಕಾಂಗ್ರೆಸ್ ಗೆಲ್ಲುವ ಕಡೆಯೆಲ್ಲ ಬಿಜೆಪಿ ವೋಟ್ ಚೋರಿ ಮೂಲಕ ಗೆಲ್ಲುತ್ತಿದೆ ಎಂದರು.
ಸಭೆಯಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕರಾದ ಎಂ. ಕೆ. ಸೋಮಶೇಖರ್ , ಕಳಲೆ ಕೇಶವಮೂರ್ತಿ , ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಕೆಎಂಎಫ್ ನಿರ್ದೇಶಕ ಈರೇಗೌಡ, ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಹಾಡ್ಯ ರಂಗಸ್ವಾಮಿ ಇದ್ದರು.