ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಡಾ. ಹಂಚಿನಮನಿ ಉದ್ಘಾಟಿಸಿದರು. ವಿಜ್ಞಾನಿಗಳಾದ ಡಾ. ಸಿದ್ದಪ್ಪ, ನಾಗೇಶ್ ಬಾಬು, ಡಾ. ರಾಮೇಗೌಡ, ಡಾ. ರವೀಂದ್ರ, ಡಾ. ವಿನಯ್, ಡಾ. ಪ್ರಸಾದ್, ಡಾ. ದೀಪಕ್ ಹಾಜರಿದ್ದರು.
ಸುತ್ತೂರು: ತೆಂಗಿನ ಉತ್ಪಾದನೆಯೊಂದಿಗೆ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕಕ್ಕೂ ಆದ್ಯತೆ ನೀಡಬೇಕು ಎಂದು ಮೈಸೂರಿನ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹಂಚಿನಮನಿ ಹೇಳಿದರು.
ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ ತೆಂಗು ಆಧಾರಿತ ಸಮಗ್ರ ಕೃಷಿ, ಅಂತರ ಬೆಳೆಗಳಿಂದ ಮೌಲ್ಯವರ್ಧನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತೆಂಗಿನಕಾಯಿಯನ್ನು ಕೇವಲ ಕಚ್ಚಾ ಉತ್ಪನ್ನವಾಗಿ ಮಾರಾಟ ಮಾಡುವ ಬದಲು, ತೆಂಗಿನೆಣ್ಣೆ, ಚಿಪ್ಸ್ ಹಾಗೂ ಇತರೆ ಮೌಲ್ಯವರ್ಧಿತ ಉತ್ಪನ್ನಗಳಾಗಿ ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಇದರಿಂದ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ ಎಂದು ಸಲಹೆ ನೀಡಿದರು.
ತೆಂಗು ವಿಶ್ವದ ಪ್ರಮುಖ ತೋಟಗಾರಿಕಾ ಬೆಳೆ. ಇದು ಕೇವಲ ರೈತರಿಗೆ ಆದಾಯ ನೀಡುವ ಬೆಳೆಯಷ್ಟೇ ಅಲ್ಲದೆ, ಆರೋಗ್ಯ ವರ್ಧನೆಗೂ ಪೌಷ್ಟಿಕಾಂಶಗಳನ್ನು ಒದಗಿಸುವ ಪ್ರಮುಖ ಆಹಾರದ ಮೂಲವಾಗಿದೆ ಎಂದರು. ತೆಂಗಿನಲ್ಲಿ ವೈಜ್ಞಾನಿಕ ನಿರ್ವಹಣೆ ಹಾಗೂ ಮೌಲ್ಯವರ್ಧನೆಯ ಮೂಲಕ ರೈತರು ನಿರಂತರ ಆದಾಯ ಗಳಿಸಬೇಕು ಎಂದು ಅವರು ಹೇಳಿದರು.
ಪ್ರಸ್ತುತ ಹವಾಮಾನ ಬದಲಾವಣೆ, ಮಳೆಯ ಅನಿಶ್ಚಿತತೆ ಮತ್ತು ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ತೆಂಗಿನ ತೋಟಗಳ ಉತ್ಪಾದಕತೆ ಹಾಗೂ ರೈತರ ಆದಾಯವನ್ನು ಸ್ಥಿರಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ತೆಂಗಿನ ತೋಟಗಳಲ್ಲಿ ಅಂತರಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ತೋಟದಲ್ಲಿ ನೀರು ಮತ್ತು ಬೆಳಕಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ರೈತರು ಬಾಳೆ, ಕೋಕೋ, ತರಕಾರಿ, ಸಾಂಬಾರ ಬೆಳೆಗಳು, ಹೂವಿನ ಬೆಳೆಗಳನ್ನು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಬೆಳೆಸಬಹುದು. ಇದರಿಂದ ಆದಾಯ ಇಮ್ಮಡಿಸುತ್ತದೆ ಎಂದು ಡಾ. ಹಂಚಿನಮನಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವಿಜ್ಞಾನಿ ಡಾ. ಜ್ಞಾನೇಶ್ ಮಾತನಾಡಿ,
ಆರಂಭಿಕ ಹಂತದಲ್ಲೇ ತೆಂಗಿನ ತೋಟದ ನಿರ್ವಹಣೆ ಅತ್ಯಂತ ಮುಖ್ಯ ಘಟ್ಟ ಎಂದರು. ಸಮರ್ಪಕ ನೀರಾವರಿ, ಪೋಷಕಾಂಶ ನಿರ್ವಹಣೆ, ಕಳೆ ನಿಯಂತ್ರಣ ಮತ್ತು ಕೀಟರೋಗ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದರು.
ತೋಟಗಳಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಲು ಸಾವಯವ ಗೊಬ್ಬರ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ಬಳಕೆಗೆ ಆದ್ಯತೆ ನೀಡಬೇಕು. ಪರಿಸರ ಸ್ನೇಹಿ ವಿಧಾನ ಬಳಸಬೇಕು ಎಂದರು.
ವಿಜ್ಞಾನಿಗಳಾದ ಡಾ. ಸಿದ್ದಪ್ಪ, ನಾಗೇಶ್ ಬಾಬು, ಡಾ. ರಾಮೇಗೌಡ, ಡಾ. ರವೀಂದ್ರ, ಡಾ. ವಿನಯ್, ಡಾ. ಪ್ರಸಾದ್, ಡಾ. ದೀಪಕ್, ದಿವ್ಯಾ ಅವರು ರೈತರ ವಿವಿಧ ಪ್ರಶ್ನೆಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡಿದರು.