ಹುಣಸೂರು ತಾಲೂಕು ವಿಜಯಗಿರಿ ಹಾಡಿಯಲ್ಲಿ ಗುರುವಾರ ಆಯೋಜಿಸಿದ್ದ ಆದಿವಾಸಿ ಭೂಮಿದಾರರ ಸಭೆಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಮಾತನಾಡಿದರು. ಹರ್ಷ, ಲಕ್ಷ್ಮೀ, ಡಾ.ಎಸ್.ಶ್ರೀಕಾಂತ್ ಇತರರಿದ್ದರು.
ಹುಣಸೂರು: ತಾಲೂಕಿನ ವಿಜಯಗಿರಿ ಹಾಡಿಯಲ್ಲಿ ಆದಿವಾಸಿಗಳಿಗೆ ಮೀಸಲಾದ 130 ಎಕರೆ ಭೂಮಿ ಒತ್ತುವರಿಯಾಗಿದ್ದು, ಕೂಡಲೇ ತಾಲೂಕು ಆಡಳಿತ ಭೂಮಿ ತೆರವುಗೊಳಿಸಿಕೊಡಬೇಕೆಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ ಆಗ್ರಹಿಸಿದರು.
ವಿಜಯಗಿರಿ ಹಾಡಿಯಲ್ಲಿ ಗುರುವಾರ ಆಯೋಜಿಸಿದ್ದ ಆದಿವಾಸಿ ಭೂಮಿದಾರರ ಸಭೆಯಲ್ಲಿ ಮಾತನಾಡಿದ ಅವರು, 1994-94ರ ಸರ್ಕಾರಿ ಆದೇಶದನ್ವಯ ದಾಸನಪುರ ಸರ್ವೇ ನಂಬರ್ 12 ಮತ್ತು 13ರಲ್ಲಿ ವಿವಿಧ ಹಾಡಿಗಳ 130 ಜೇನುಕುರುಬ ಆದಿವಾಸಿ ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ 260 ಎಕರೆ ಭೂಮಿಯನ್ನು ಹಂಚಿ ಸಾಗುವಳಿ ಪತ್ರ ನೀಡಿತ್ತು. ಅಲ್ಲದೆ 4 ಗ್ರಾಮ ಠಾಣೆಗಳಿಗೆ 8 ಎಕರೆ, ಶಾಲೆಗೆ 4 ಎಕರೆ ಹಾಗೂ ಸಂಘ, ಮಹಿಳಾ ಸಂಘಕ್ಕೆ ತಲಾ 4 ಎಕರೆಯಂತೆ ಭೂಮಿ ಮಂಜೂರು ಮಾಡಿತ್ತು. ಈ ಭೂಮಿಯನ್ನು ಸುತ್ತಲ ಗ್ರಾಮಗಳ ರೈತರು ಒತ್ತುವರಿ ಮಾಡಿದ್ದಾರೆ. ಗ್ರಾಮ ಠಾಣೆಗಳನ್ನೂ ಒತ್ತುವರಿ ಮಾಡಿದ್ದಾರೆ. ಈ ಒತ್ತುವರಿ ಬಿಡಿಸಬೇಕು. ಅಲ್ಲದೆ ಇನ್ನೂ 40 ಮಂಜೂರಾತಿದಾರರಿಗೆ ಭೂ ಸ್ವಾದೀನ ನೀಡಬೇಕು. ಇವರಿಗೆ ನೀಡಬೇಕಾದ ಈ ಭೂಮಿಯನ್ನು ಬೇರೆಯವರು ಬಳಸುತ್ತಿದ್ದಾರೆ. ಇವರನ್ನು ತೆರವುಗೊಳಿಸಿ ಮೂಲ ಮಂಜೂರಾತಿದಾರರಿಗೆ ಭೂಮಿಯ ಸ್ವಾಧೀನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ನೀಡಿರುವ 280 ಎಕರೆ ಭೂಮಿಗೆ ಸುತ್ತಲೂ ಟ್ರಂಚ್ ತೆಗೆಸಿ ಗಡಿ ನಿರ್ಮಿಸಿ ಇತರರು ಒತ್ತುವರಿ ಮಾಡದಂತೆ ಕ್ರಮವಹಿಸಬೇಕು, ಗ್ರಾಮ ಠಾಣೆಗಳಿಗೆ ಗಡಿ ನಿರ್ಮಿಸಿ ನಾಮಫಲಕ ಹಾಕಬೇಕು, ಸ್ಮಶಾನ, ದೇವಸ್ಥಾನ, ವಸತಿ ಶಾಲೆ ಇವುಗಳಿಗೆ ಜಾಗ ಗುರುತಿಸಿ ಮಂಜೂರು ಮಾಡಬೇಕು. ಸ್ವಾಧೀನ ಕೊಡುವಾಗ ಬ್ಲಾಕ್ ನಂಬರ್‌ಗಳು ಬದಲಾಗಿವೆ. ಅವುಗಳನ್ನು ಸರಿಪಡಿಸಬೇಕು. 4 ಗ್ರಾಮ ಠಾಣೆ ಹಾಗೂ ಸ್ಮಶಾನ, ದೇವಸ್ಥಾನ, ವಸತಿ ಶಾಲೆಗಳ ಜಾಗಕ್ಕೆ ರಸ್ತೆ ಸಂಪರ್ಕ ಏರ್ಪಡಿಸಬೇಕು. ಈ ವಿಷಯಗಳ ಕುರಿತು ತಾಲೂಕು ತಹಸೀಲ್ದಾರರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ವಿಜಯಗಿರಿ ಭೂಮಿದಾರರ ಸಮಿತಿ ಅಧ್ಯಕ್ಷ ಬಸವರಾಜ್ ಗಿರಿಜನ ಮಹಿಳಾ ಸಂಘಗದ ಅಧ್ಯಕ್ಷೆ ಲಕ್ಷ್ಮೀ, ಹರ್ಷ, ವಿಠಲ್, ಲಕ್ಷ್ಮೀ, ಡಾ.ಶ್ರೀಕಾಂತ್, ಪ್ರಕಾಶ್, ಗೌರಮ್ಮ, ಕುಳ್ಳಯ್ಯ ಹಾಜರಿದ್ದರು.