ಜನರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿರುವ ವಿದ್ಯಾರ್ಥಿಗಳು
ನಗರ ಪಾಲಿಕೆಯು ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ನಿರಂತರವಾಗಿ ಅರಿವು ಮೂಡಿಸುತ್ತಿದ್ದರೂ ಕೆಲವು ಜನರಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ಮನಗಂಡ ನಗರ ಪಾಲಿಕೆಯು ವಿದ್ಯಾರ್ಥಿಗಳ ಮೂಲಕ ಜನರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡಿದೆ.
ಪಾಲಿಕೆ ಅಧಿಕಾರಿಗಳು ವಲಯವಾರು ತಂಡ ರಚಿಸಿಕೊಂಡು ಆ ವಲಯದಲ್ಲಿರುವ ಪ್ರತಿಯೊಂದು ಶಾಲೆಗಳಿಗೆ ತೆರಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಗರವನ್ನು ಶುಚಿಯಾಗಿ ಏತಕ್ಕೆ ಇಡಬೇಕು? ಇದರಿಂದ ನಮಗೆ ಆಗುವ ಆರೋಗ್ಯದ ಲಾಭಗಳೇನು? ನಗರ ಶುಚಿಯಾಗಿದ್ದರೆ ನಗರದ ಹಿರಿಮೆ ಹೇಗೆಲ್ಲ ಹೆಚ್ಚಾಗುತ್ತದೆ ಎಂಬ ಕುರಿತು ಮಕ್ಕಳಿಗೆ ತಿಳಿಸಿಕೊ ಡಲಾಗುತ್ತಿದೆ. ಈ ಅರಿವಿನ ಕಾರ್ಯಕ್ರಮದ ನಂತರ ಕೆಲವು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ತಮ್ಮ ಶಾಲೆಯ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ತೆರಳಿ ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.
ಪ್ರತಿನಿತ್ಯ ಮನೆ ಮನೆಗಳಿಂದ ಪೌರ ಕಾರ್ಮಿಕರು ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಆದರೆ, ಕೆಲವು ನಾಗರಿಕರು ಪೌರ ಕಾರ್ಮಿಕರು ಮನೆ ಬಾಗಿಲಿಗೆ ಬಂದಂತಹ ಸಂದರ್ಭದಲ್ಲಿ ತ್ಯಾಜ್ಯವನ್ನು ನೀಡಿ ಸಹಕರಿಸದೆ ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವ ಪ್ರವೃತ್ತಿ ಬೆಳೆಸಿಕೊಂ ಡಿದ್ದಾರೆ. ಇನ್ನು ಕೆಲವರು ಹಸಿಕಸ ಹಾಗೂ ಒಣ ಕಸ ಬೇರ್ಪಡಿಸುವ ಕಷ್ಟಕ್ಕೆ ಎಲ್ಲ ಕಸವನ್ನು ರಸ್ತೆ ಬದಿಯಲ್ಲಿ ತಂದು ಸುರಿಯುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ.
‘ಪ್ರತಿಯೊಂದು ಮನೆಗಳಲ್ಲಿ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಪಾಲಿಕೆಯ ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ನೀಡುವ ಮೂಲಕ ನಗರವನ್ನು ಶುಚಿಯಾಗಿ ಇಡಲು ನಿಮ್ಮ ಪಾಲಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು’ ಎಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಜಾಗೃತಿಯ ಕಾರ್ಯಕ್ಕೆ ಎಷ್ಟರ ಮಟ್ಟಿಗೆ ಸ್ಪಂದನೆ ದೊರೆಯುತ್ತದೆ ಎಂದು ಕಾದು ನೋಡಬೇಕಾಗಿದೆ.
ವಿವಿಧ ಸ್ಪರ್ಧೆ: ಶಾಲಾ, ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಕುರಿತು ಮೂಡಿಸುವುದು ಮಾತ್ರವಲ್ಲದೆ ನಗರ ಪಾಲಿಕೆಯು ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದೆ. ಪ್ರಸಕ್ತ ವರ್ಷ ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ, ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಕಲಾಕೃತಿ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸ್ಪರ್ಧೆಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆಯಿತು. ಗಣೇಶೋತ್ಸವ ಸಂದರ್ಭ ಸಾಕಷ್ಟು ಜನರು ಪಿಒಪಿಯಿಂದ ತಯಾರಿಸಿದ ಗಣೇಶೋತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಜಲಮಾಲಿನ್ಯ ಉಂಟಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಣ್ಣಿನ ಗಣಪತಿ ತಯಾರಿಸುವ ಸ್ಪರ್ಧೆಯನ್ನು ಕಳೆದ ವರ್ಷ ಆಯೋಜಿಸ ಲಾಗಿತ್ತು. ಹಲವಾರು ವಿದ್ಯಾರ್ಥಿಗಳು ಮಣ್ಣಿನ ಗಣಪತಿ ತಯಾರಿಸುವ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ದಂಡದ ಮೂಲಕ ಎಚ್ಚರಿಕೆ: ಒಂದೆಡೆ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುತ್ತಿರುವ ನಗರ ಪಾಲಿಕೆಯು ಮತ್ತೊಂದೆಡೆ ಸ್ವಚ್ಛತೆಗೆ ಸಹಕಾರ ನೀಡದೆ ಇರುವವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡುವ ಕಾರ್ಯ ಮಾಡುತ್ತಿದೆ. ನಗರದಲ್ಲಿ ಪ್ರತಿನಿತ್ಯ 550 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಈ ಪೈಕಿ 430 ಟನ್ ತ್ಯಾಜ್ಯವು ಮನೆ ಮನೆಗಳಿಂದ ಸಂಗ್ರಹವಾಗುತ್ತಿದ್ದು, ಉಳಿದ 120 ಟನ್ ತ್ಯಾಜ್ಯ ರಸ್ತೆ ಬದಿಯಲ್ಲಿ, ನಿರ್ಜನ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಮನೆ ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯಕ್ಕೆ ಹೋಲಿಕೆ ಮಾಡಿದರೆ ರಸ್ತೆ ಬದಲಿಯಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಪ್ರಮಾಣ ಕಡಿಮೆ ಇದೆ. ಕೆಲವು ಜನರು ಮಾತ್ರ ರಸ್ತೆಗೆ ಕಸ ಎಸೆಯುತ್ತಿದ್ದಾರೆ. ಇವರು ಸಹ ಸಹಕಾರ ನೀಡಿದರೆ ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಿಸಲು ಸಹಕಾರಿಯಾಗುತ್ತದೆ.
ನಗರದ ಪ್ರತಿಯೊಂದು ಶಾಲೆಗಳಿಗೆ ನಗರ ಪಾಲಿಕೆಯ ಅಧಿಕಾರಿಗಳು ತೆರಳಿ ಸ್ವಚ್ಛತೆಯ ಕುರಿತು ಅರಿವು ಮೂಡಿಸುತ್ತಿದ್ದೇವೆ. ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರಿಂದ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸ್ವಚ್ಛತೆಯ ಮಹತ್ವವನ್ನು ಮಕ್ಕಳು ಅರಿತುಕೊಂ ಡರೆ ನಗರವನ್ನು ಶುಚಿಯಾಗಿ ಇಡಬಹುದು. ಕೆಲವು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ವಚ್ಛತೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯಿಂದ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಕೆ.ಎಸ್.ಮೃತ್ಯುಂಜಯ, ಕಾರ್ಯನಿರ್ವಾಹಕ ಇಂಜಿನಿಯರ್ (ಪರಿಸರ), ನಗರ ಪಾಲಿಕೆ