ತಿ.ನರಸೀಪುರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಸಮಸ್ಯೆ ಹಾಗು ಬೇಡಿಕೆಗಳ ಆಲಿಸಿ ಮಾತನಾಡಿದರು. ಟಿ.ಜೆ.ಸುರೇಶಾಚಾರ್, ಸಿ.ಶ್ರೀನಿವಾಸ್ ಇದ್ದರು.
ತಿ.ನರಸೀಪುರ : ಪೌರ ಕಾರ್ಮಿಕರು ನಗರ, ಪಟ್ಟಣದ ಸ್ವಚ್ಛತೆ ಶ್ರಮಿಸಿ, ಪರಿಸರದಲ್ಲಿ ನೈರ್ಮಲ್ಯವನ್ನು ಕಾಪಾಡಲು ಅಗಲಿರುವ ದುಡಿಯುವುದರಿಂದ ಅವರ ಆರೋಗ್ಯದ ಬಗ್ಗೆಯೂ ಅಧಿಕಾರಿಗಳು ಕಾಳಜಿ ವಹಿಸಿ, ಸ್ವಚ್ಛತಾ ಕಾರ್ಯದ ವೇಳೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯ ಸಿ.ಶಂಕರ ಅಂಕನಶೆಟ್ಟಿಪುರ ತಾಕೀತು ಮಾಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದಂತಹ ಪೌರ ಕಾರ್ಮಿಕರೊಂದಿಗೆ ಸಂವಾದ ಹಾಗೂ ಸಭೆಯಲ್ಲಿ ಮಾತನಾಡಿದ ಅವರು ಕಾರ್ಮಿಕರ ಹಿತಾಸಕ್ತಿಗೆ ಸಂಬಂಧಿಸಿದ ಸರ್ಕಾರದ ಸೌಲತ್ತುಗಳು ಹಾಗೂ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ದೊರಕಿಸಿಕೊಡಲು ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದರು.
ಪೌರ ಕಾರ್ಮಿಕರು ತಮ್ಮ ಸಮುದಾಯಕ್ಕೆ ಸಂಬಂಧಿಸಿದ ಹಲವು ಮೂಲಭೂತ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ವಿಶೇಷವಾಗಿ ಸ್ಮಶಾನ ಭೂಮಿ, ನಿವೇಶನ ಹಂಚಿಕೆ ಹಾಗೂ ಸಮುದಾಯ ಭವನ ನಿರ್ಮಾಣದ ಬೇಡಿಕೆಯನ್ನು ಪ್ರಮುಖವಾಗಿ ಮಂಡಿಸಿದರು.
ಕಾರ್ಮಿಕರ ಪ್ರತಿನಿಧಿಗಳು ಮಾತನಾಡಿ, ಹಲವು ವರ್ಷಗಳಿಂದ ಪೌರ ಕಾರ್ಮಿಕರ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಇಲ್ಲದಿರುವುದರಿಂದ ಮೃತರ ಅಂತ್ಯಸಂಸ್ಕಾರ ನಡೆಸಲು ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.ಇರುವ ಶ್ಮಶಾನದಲ್ಲಿ ಮೃತ ಪಟ್ಟವರಿಗೆ ಗೋರಿಗಳನ್ನು ನಿರ್ಮಿಸಿರುವುದರಿಂದ ತೀವ್ರ ಸಮಸ್ಯೆ ಎದುರಾಗಿದೆ,ಮುಂದುವರೆದ ಸಮಾಜದವರಿಗೆ ಎರಡೆರಡು ಸ್ನಶಾನಗಳನ್ನು ನೀಡಲಾಗಿದೆ.ಆದರೆ ಪೌರ ಕಾರ್ಮಿಕರಾದ ನಮಗೆ ಸಮರ್ಪಕ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಅದೇ ರೀತಿ, ನಿವೇಶನವಿಲ್ಲದೆ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಅನೇಕ ಪೌರ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ವತಿಯಿಂದ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಸ್ವಂತ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದರೆ ಕಾರ್ಮಿಕರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನಕ್ಕೆ ಸ್ಥಳ ಗುರುತಿಸಲಾಗಿದ್ದರೂ ಭವನ ನಿರ್ಮಾಣ ಕಾರ್ಯ ನಡೆದಿಲ್ಲ,ಹಾಗಾಗಿ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರ ಮನವಿಗೆ ಸ್ಪಂದಿಸಿದ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯರು, ಮುಖ್ಯಾಧಿಕಾರಿ ಶ್ರೀನಿವಾಸ್ ಹಾಗು ತಹಸೀಲ್ದಾರ್ ಟಿ. ಜೆ.ಸುರೇಶಾಚಾರ್ ರವರು ಸ್ಮಶಾನ, ನಿವೇಶನ ಹಾಗೂ ಸಮುದಾಯ ಭವನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗುವುದು. ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಶೂ,ಗ್ಲೌಸ್ ,ಮಾಸ್ಕ್ ಧರಿಸದಿದ್ದಲ್ಲಿ ಕ್ರಮ..!
ಮುಖ್ಯಾಧಿಕಾರಿ ಸಿ. ಶ್ರೀನಿವಾಸ್ ಮಾತನಾಡಿ, ಪೌರ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳಾದ ಗ್ಲೌಸ್, ಶೂ, ಮಾಸ್ಕ್ ಸೇರಿದಂತೆ ಅಗತ್ಯ ಸುರಕ್ಷತಾ ಉಪಕರಣಗಳನ್ನು ಧರಿಸಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.
ಸ್ವಚ್ಛತಾ ಕಾರ್ಯದ ವೇಳೆ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ಪುರಸಭೆಯಿಂದ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಆದರೂ ಕೆಲ ಕಾರ್ಮಿಕರು ಗ್ಲೌಸ್ ಮತ್ತು ಶೂಗಳನ್ನು ಬಳಸದೇ ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು..
ಸುರಕ್ಷತಾ ಪರಿಕರಗಳ ಬಳಕೆ ಕೇವಲ ನಿಯಮವಲ್ಲ, ಅದು ಕಾರ್ಮಿಕರ ಆರೋಗ್ಯ ರಕ್ಷಣೆಗೆ ಅಗತ್ಯವಾಗಿದೆ. ಸೋಂಕು, ಗಾಯಗಳು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಕಾರ್ಮಿಕರೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರಿಕರಗಳನ್ನು ನೀಡಿದ ಬಳಿಕವೂ ಅವುಗಳನ್ನು ಬಳಸದೇ ಇದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಮೂರು ತಿಂಗಳಿಗೊಮ್ಮೆ ತಪಾಸಣೆಗೊಳಗಾಗಿ....!
ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಮಾತನಾಡಿ ಪೌರ ಕಾರ್ಮಿಕರು ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಯ ಕಾವಲುಗಾರರಾಗಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ಲಸಿಕೆ ಪಡೆಯುವುದು ಹಾಗೂ ವೈದ್ಯರ ಸಲಹೆಗಳನ್ನು ಪಾಲಿಸುವುದು ಅಗತ್ಯ ಎಂದು ತಿಳಿಸಿದರು.
ಸ್ವಚ್ಛತಾ ಕಾರ್ಯದ ವೇಳೆ ಕೈಗವಸು, ಶೂ, ಮಾಸ್ಕ್ ಸೇರಿದಂತೆ ಸುರಕ್ಷತಾ ಉಪಕರಣಗಳನ್ನು ಕಡ್ಡಾಯವಾಗಿ ಬಳಸಬೇಕು. ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಹಿರಿಯ ಆರೋಗ್ಯ ನಿರೀಕ್ಷಕಿ ಚಂಪಾಶ್ರೀ ಯವರನ್ನು ತರಾಟೆಗೆ ಒಳಪಡಿಸಿದ ಆಯೋಗದ ಸದಸ್ಯರು ಕಚೇರಿಗೆ 6 ಗಂಟೆಗೆ ಬರಬೇಕಾದ ನೀವು 9 ಗಂಟೆಗೆ ಬರುತ್ತೀರೆಂಬ ದೂರು ಕೇಳಿ ಬಂದಿದೆ,ಹಾಗಾಗಿ ಸಮಯಕ್ಕೆ ಸರಿಯಾಗಿ ಬರುವುದನ್ನು ರೂಢಿಸಿಕೊಳ್ಳಿ ಎಂದು ತಿಳಿಸಿದರು. ಜೊತೆಗೆ ಪೌರ ಕಾರ್ಮಿಕರಿಗೆ ರಜೆ ಕೊಡಲು ಸತಾಯಿಸುತ್ತಾರೆ ಎಂಬ ದೂರು, ಸಹ ಕೇಳಿ ಬಂದಿದ್ದು ರಜೆಗಳು ಇದ್ದಲ್ಲಿ ಯಾವುದೇ ರಗಳೆ ಇಲ್ಲದೆ ರಜೆ ನೀಡಬೇಕೆಂದು ಸೂಚಿಸಿದರು.ಪೌರ ಕಾರ್ಮಿಕರಿಗೆ ಬೆಳಿಗ್ಗೆ ನೀಡುತ್ತಿರುವ ಉಪಹಾರದ ಕುರಿತಂತೆ ಸಹ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.
ಸಮಾಜ ಕಲ್ಯಾಣಾಧಿಕಾರಿ ಕೆ. ಡಿ.ವಿನೂತನ್, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಸಮುದಾಯ ಸಂಘಟನಾಧಿಕಾರಿ ನಳಿನಿ, ಕಂದಾಯಾಧಿಕಾರಿ ಕೆ.ಸಿ.ತ್ರಿವೇಣಿ, ಕಂದಾಯ ನಿರೀಕ್ಷಕ ಅಶೋಕ್, ಲೆಕ್ಕಾಧಿಕಾರಿ ವಿನಯ್, ಸಿಬ್ಬಂದಿಗಳಾದ ಆಶಾ,ಗೋಪಾಲ್, ನಿಂಗರಾಜು, ಸ್ಯಾನಿಟರಿ ಸೂಪರ್ ವೈಸರ್ ಪ್ರಸನ್ನ, ಪೌರ ಕಾರ್ಮಿಕರಾದ ಶಿವಣ್ಣ, ಸೋಮ, ಮಹದೇವ,ಸರೋಜ, ಜ್ಯೋತಿ, ಭಾಗ್ಯ, ಗಣೇಶ್, ಸತೀಶ, ನಿಂಗರಾಜು, ಮನೋಜ್, ಮಣಿರಾಜು, ನವೀನ್ ಮತ್ತಿತರರಿದ್ದರು.