ನಗರಪಾಲಿಕೆಯಿಂದ ಪೌರಕಾರ್ಮಿಕರಿಗಾಗಿ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ನಿತೇಶ್‌ಪಾಟೀಲ್ ಉದ್ಘಾಟಿಸಿದರು. ಸಿ.ಎನ್.ಮಂಜೇಗೌಡ, ಅಸಾದ್ ಉರ್ ರೆಹಮಾನ್ ಶರೀಫ್, ಡಾ. ವೆಂಕಟೇಶ್, ಶ್ರೀನಿವಾಸ್, ರಮೇಶ್, ಮಂಜುನಾಥರೆಡ್ಡಿ ಇದ್ದರು.
- ತಮ್ಮ ಮಕ್ಕಳನ್ನು ಉತ್ತಮವಾಗಿ ಓದಿಸುವ ಮೂಲಕ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು
- ನಗರದ ಸ್ವಚ್ಛತೆಗೆ ಶ್ರಮಿಸುವ ಮೂಲಕ ನಗರ ಸ್ವಚ್ಛನಗರಿ ಪ್ರಶಸ್ತಿ ಗಳಿಸುವಂತೆ ಮಾಡಬೇಕು
ಮೈಸೂರು: ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನ ಕೊಡಬೇಕು ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ನಗರಪಾಲಿಕೆಯಿಂದ ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ್ ಮಿಷನ್ 2.0’ ಯೋಜನೆ ಅಡಿಯಲ್ಲಿ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಾಗಿ ಆಯೋಜಿಸಿದ್ದ ಒಂದು ದಿನದ ವಿಶೇಷ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತಮ್ಮ ಮಕ್ಕಳನ್ನು ಉತ್ತಮವಾಗಿ ಓದಿಸುವ ಮೂಲಕ ಅವರನ್ನು ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕರೆನೀಡಿದರು.
ಪೌರಕಾರ್ಮಿಕರು ಒಂದು ರೀತಿಯಲ್ಲಿ ದೇಶ ಕಾಯುವ ಸೈನಿಕರಿದ್ದಂತೆ. ಅವರು ಕೂಡ ತಮ್ಮ ಕಾರ್ಯದಲ್ಲಿ ಶಿಸ್ತು ಅಳವಡಿಸಿಕೊಳ್ಳಬೇಕು. ನಗರದ ಸ್ವಚ್ಛತೆಗೆ ಶ್ರಮಿಸುವ ಮೂಲಕ ನಗರ ಸ್ವಚ್ಛನಗರಿ ಪ್ರಶಸ್ತಿ ಗಳಿಸುವಂತೆ ಮಾಡಬೇಕು ಎಂದರು.
ನಗರಪಾಲಿಕೆ ಆಡಳಿತಾಧಿಕಾರಿಯಾದ ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಮಾತನಾಡಿ, ನಗರವು ಸ್ವಚ್ಛತೆಯಲ್ಲಿ ದೇಶದಲ್ಲೇ ಅತ್ಯುತ್ತಮ ಶ್ರೇಣಿ ಪಡೆಯುತ್ತಿರುವುದಕ್ಕೆ ಪೌರಕಾರ್ಮಿಕರ ಅಪಾರ ಶ್ರಮವೇ ಪ್ರಮುಖ ಕಾರಣವಾಗಿದೆ. ಪೌರಕಾರ್ಮಿಕರಿಗೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಶೂಗಳು, ಕೈಗವಸುಗಳನ್ನು ವಿತರಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಗಮನ ನೀಡಬೇಕು ಎಂದರು.
ರಾಜ್ಯ ನಗರಾಭಿವೃದ್ಧಿ ಸಂಸ್ಥೆಯ ನಿರ್ದೇಶಕ ಅಸಾದ್ ಉರ್ ರೆಹಮಾನ್ ಶರೀಫ್ ಮಾತನಾಡಿದರು. ನಗರದಪಾಲಿಕೆ ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್, ಪಶ್ಚಿಮ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ್, ವಲಯ ಆಯುಕ್ತರಾದ ರಮೇಶ್, ಮಂಜುನಾಥರೆಡ್ಡಿ, ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೀನಾಕ್ಷಿ, ಭಗೀರಥ ಸಂಸ್ಥೆಯ ಸಂಸ್ಥಾಪಕ, ಹಿರಿಯ ಸಮಾಲೋಚಕ ಕುಲಕರ್ಣಿ, ಅಖಿಲ ಭಾರತ ಸ್ಥಳೀಯ ಸ್ವಯಂ ಸರ್ಕಾರ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಕಿರಣ್, ಹಿರಿಯ ಸಮಾಲೋಚಕ ಜಿತೇಂದ್ರ ಇತರರು ಇದ್ದರು.
ಮಹಾನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳ ಕುರಿತು ಅಧ್ಯಯನ ನಡೆಸಲು ಮತ್ತು ತರಬೇತಿ ಪಡೆಯಲು ಹುಬ್ಬಳ್ಳಿ-ಧಾರವಾಡ ಹಾಗೂ ಬಳ್ಳಾರಿ ಮಹಾನಗರ ಪಾಲಿಕೆಗಳ ಸುಮಾರು 90ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು.